ADVERTISEMENT

ಜವಳಿ ರಫ್ತು ಶೇ 7ರಷ್ಟು ಏರಿಕೆ

ಪಿಟಿಐ
Published 2 ಜನವರಿ 2025, 14:32 IST
Last Updated 2 ಜನವರಿ 2025, 14:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಆರ್ಥಿಕ ವರ್ಷದ ಏಪ್ರಿಲ್‌–ಅಕ್ಟೋಬರ್ ಅವಧಿಯಲ್ಲಿ ದೇಶದ ಜವಳಿ ಮತ್ತು ಸಿದ್ಧ ಉಡುಪು, ಕರಕುಶಲ ವಸ್ತುಗಳ ರಫ್ತು ಮೌಲ್ಯ ₹1.83 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಗುರುವಾರ ತಿಳಿಸಿದೆ.

2023–24ರ ಇದೇ ಅವಧಿಯಲ್ಲಿ ರಫ್ತು ಮೌಲ್ಯ ₹1.71 ಲಕ್ಷ ಕೋಟಿ ಆಗಿತ್ತು. ಈ ರಫ್ತು ಪ್ರಮಾಣಕ್ಕೆ ಹೋಲಿಸಿದರೆ ಶೇ 7ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಒಟ್ಟು ರಫ್ತು ಪ್ರಮಾಣ ₹1.83 ಲಕ್ಷ ಕೋಟಿ ಆಗಿದೆ. ಈ ಪೈಕಿ ಸಿದ್ಧ ಉಡುಪುಗಳ ವರ್ಗದ ಮೌಲ್ಯವು ಶೇ 41ರಷ್ಟು ಪಾಲು ಹೊಂದಿದ್ದು, ₹74,887 ಕೋಟಿ ಮೌಲ್ಯ ಹೊಂದಿದೆ. ಹತ್ತಿ ಬಟ್ಟೆಯಿಂದ ತಯಾರಿಸಿದ ಉಡುಪುಗಳ ರಫ್ತು ಮೌಲ್ಯ ₹60,730 ಕೋಟಿ (ಶೇ 33) ಮತ್ತು ಕರಕುಶಲ ವಸ್ತುಗಳ (ಮಾನವ ನಿರ್ಮಿತ ಉತ್ಪನ್ನ) ರಫ್ತು ₹26,626 ಕೋಟಿ (ಶೇ 15) ಹೊಂದಿದೆ ಎಂದು ತಿಳಿಸಿದೆ.

ADVERTISEMENT

ಇದೇ ವೇಳೆ ನೂಲು ಮತ್ತು ಕೈಮಗ್ಗದ ಉತ್ಪನ್ನಗಳ ರಫ್ತು ಕ್ರಮವಾಗಿ ಶೇ 19 ಮತ್ತು ಶೇ 6ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ಭಾರತವು ಜವಳಿ ಮತ್ತು ಉಡುಪುಗಳ ರಫ್ತಿನಲ್ಲಿ ಜಾಗತಿಕವಾಗಿ ಶೇ 3.9ರಷ್ಟು ಪಾಲು ಹೊಂದಿದೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟಕ್ಕೆ ಶೇ 47ರಷ್ಟು ಉತ್ಪನ್ನಗಳನ್ನು ರಫ್ತು ಮಾಡುತ್ತದೆ. 

ಕೆಂಪು ಸಮುದ್ರದಲ್ಲಿ ತಲೆದೋರಿರುವ ಸರಕು ಸಾಗಣೆ ಬಿಕ್ಕಟ್ಟಿನಿಂದಾಗಿ 2023–24ರಲ್ಲಿ ರಫ್ತು ಪ್ರಮಾಣ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಕಡಿಮೆಯಾಗಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.