ADVERTISEMENT

ನಿರುದ್ಯೋಗ | ಆಗಸ್ಟ್‌ ತಿಂಗಳಲ್ಲಿ ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ

ಪಿಟಿಐ
Published 2 ಸೆಪ್ಟೆಂಬರ್ 2022, 2:12 IST
Last Updated 2 ಸೆಪ್ಟೆಂಬರ್ 2022, 2:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಆಗಸ್ಟ್‌ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಒಂದು ವರ್ಷದ ಗರಿಷ್ಠ ಮಟ್ಟವಾದ ಶೇಕಡ 8.3ಕ್ಕೆ ಹೆಚ್ಚಳವಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ.

ಆಗಸ್ಟ್‌ನಲ್ಲಿ ಒಟ್ಟು 20 ಲಕ್ಷ ಉದ್ಯೋಗ ಕಡಿಮೆ ಆಗಿದ್ದು, 39.46 ಕೋಟಿಗೆ ತಲುಪಿದೆ ಎಂದು ತಿಳಿಸಿದೆ.

ಜುಲೈನಲ್ಲಿ ನಿರುದ್ಯೋಗವು ಶೇ 6.8ರಷ್ಟು.

ADVERTISEMENT

‘ಸಾಮಾನ್ಯವಾಗಿ ನಗರ ಪ್ರದೇಶಗಳ ನಿರುದ್ಯೋಗ ಪ್ರಮಾಣವು ಗ್ರಾಮೀಣ ಪ್ರದೇಶಗಳಿಗಿಂತಲೂ ಹೆಚ್ಚಿಗೆ ಇರುತ್ತದೆ.ಗ್ರಾಮೀಣ ಭಾಗದಲ್ಲಿ ಜುಲೈನಲ್ಲಿ ಶೇ 6.1ರಷ್ಟು ಇದ್ದ ನಿರುದ್ಯೋಗ ಪ್ರಮಾಣವು ಆಗಸ್ಟ್‌ನಲ್ಲಿ ಶೇ 7.7ಕ್ಕೆ ಏರಿಕೆ ಆಗಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 9.6ಕ್ಕೆ ಏರಿಕೆ ಕಂಡಿದೆ’ ಎಂದು ಸಿಎಂಐಇನ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ವ್ಯಾಸ್‌ ತಿಳಿಸಿದ್ದಾರೆ.

‘ಅತಿಯಾದ ಮಳೆಯಿಂದಾಗಿ ಬಿತ್ತನೆ ಚಟುವಟಿಕೆ ಮೇಲೆ ಪರಿಣಾಮ ಉಂಟಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಲು ಇದೂ ಒಂದು ಕಾರಣ’ ಎಂದು ಅವರು ಹೇಳಿದ್ದಾರೆ.

‘ಮುಂಗಾರು ಅವಧಿಯ ಅಂತ್ಯದ ವೇಳೆಗೆ ಕೃಷಿ ಚಟುವಟಿಕೆಳು ಹೆಚ್ಚಾದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಆಗಬಹುದು. ಆದರೆ, ಮುಂಬರುವ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಹೇಗಿರಲಿದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಅವರು ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಹರಿಯಾಣ, ಜಮ್ಮು ಕಾಶ್ಮೀರ, ರಾಜಸ್ಥಾನ, ಜಾರ್ಖಂಡ್‌, ತ್ರಿಪುರಾದಲ್ಲಿ ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇದೆ. ಛತ್ತಿಸಗಡ, ಮೇಘಾಲಯ, ಮಹಾರಾಷ್ಟ್ರ, ಗುಜರಾತ್‌ ಮತ್ತು ಒಡಿಶಾದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.