ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸರ್ಕಾರ ಪ್ರಕಟಿಸಿರುವ ಹೊಸ ಕೈಗಾರಿಕಾ ನೀತಿ 2025-30 ಮಾರ್ಗಸೂಚಿಯಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಹೇಳಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ₹7.50 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲು ನಿರ್ಧರಿಸಲಾಗಿದೆ. ಈ ನೀತಿಯು ಕರ್ನಾಟಕದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಲಿದೆ ಎಂದು ಹೇಳಿದ್ದಾರೆ.
ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. ಏಕಗವಾಕ್ಷಿ ವ್ಯವಸ್ಥೆಯ ಮೂಲಕ ವ್ಯಾಪಾರ ವಹಿವಾಟನ್ನು ಹೆಚ್ಚಿಸುವ ಸರ್ಕಾರದ ಬದ್ಧತೆ ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ.
ಹಿಂದುಳಿದ ಮತ್ತು ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್‌ಎಂಇ) ವಿಶೇಷ ಪ್ರೋತ್ಸಾಹ ಸಿಗಲಿದೆ. ಸರಕು ಸಾಗಣೆ ಮತ್ತು ದಾಸ್ತಾನು ಮಳಿಗೆಗಳನ್ನು ಉದ್ಯಮವಾಗಿ ಪರಿಗಣಿಸಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವು ಎಂಎಸ್ಎಂಇಗಳಿಗೆ ಘೋಷಿಸಿದ ಪ್ರೋತ್ಸಾಹ ಧನವನ್ನು ಆಯಾ ಆರ್ಥಿಕ ವರ್ಷಗಳ ಆಯವ್ಯಯ ಹಂಚಿಕೆಯಡಿ ಸೇರಿಸಿ ಬಿಡುಗಡೆ ಮಾಡಬೇಕು. ಸದ್ಯ ಆಗುತ್ತಿರುವ ವಿಳಂಬ ತಪ್ಪಿಸಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.