ADVERTISEMENT

ಬಿಜಿಎಂಎಲ್‌ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್: ನಿರಾಣಿ ಮನವಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:28 IST
Last Updated 11 ಆಗಸ್ಟ್ 2021, 19:28 IST

ಬೆಂಗಳೂರು: ಕೋಲಾರ ಜಿಲ್ಲೆ ಕೆಜಿಎಫ್‌ನ ಭಾರತ್ ಗೋಲ್ಡ್ ಮೈನ್ಸ್ ಕಂಪನಿಯ (ಬಿಜಿಎಂಎಲ್‌) ವ್ಯಾಪ್ತಿಯಲ್ಲಿ ಬಳಕೆಯಾಗದೆ ಇರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ (ಇಂಡಸ್ಟ್ರಿಯಲ್ ಟೌನ್‍ಶಿಪ್) ಆರಂಭಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರನ್ನು ದೆಹಲಿಯಲ್ಲಿ ಬುಧವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಿರಾಣಿ, ಕೆಜಿಎಫ್‌ನಲ್ಲಿ ಟೌನ್‍ಶಿಪ್ ನಿರ್ಮಾಣದ ಅಗತ್ಯದ ಬಗ್ಗೆ ಮನವರಿಕೆ ಮಾಡಿದರು.

ನಿರಾಣಿ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜೋಶಿ, ‘ಸ್ಥಳ ಪರಿಶೀಲಿಸಿ, ವಸ್ತುಸ್ಥಿತಿ ಅಧ್ಯಯನ ಮಾಡಲು ಸದ್ಯದಲ್ಲಿ ಅಧಿಕಾರಿಗ ಳನ್ನು ಕಳುಹಿಸುತ್ತೇನೆ. ಟೌನ್‍ಶಿಪ್ ಸ್ಥಾಪಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಬಿಜಿಎಂಎಲ್‌ ವ್ಯಾಪ್ತಿಯಲ್ಲಿರುವ ಸುಮಾರು 3,212 ಎಕರೆ ಪ್ರದೇಶದಲ್ಲಿ ಡ್ರೋಣ್ ಮೂಲಕ ಸಮೀಕ್ಷೆ ನಡೆಸಿದ್ದ ಕೇಂದ್ರ ಸರ್ಕಾರ, ಈ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ, ಬಳಕೆಯಾಗದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಿಸಲು ಅನುಮತಿ ನೀಡುವಂತೆ ನಿರಾಣಿ ಮನವಿ ಮಾಡಿದರು.

ಬೆಂಗಳೂರಿನಿಂದ ಕೆಜಿಎಫ್‌ ಸುಮಾರು 100 ಕಿ.ಮೀ ದೂರದಲ್ಲಿದೆ. ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯುತ್ತಮ ರೈಲ್ವೆ ಸಂಪರ್ಕ ಹೊಂದಿದ್ದು, ಕೈಗಾರಿಕೆ ಸ್ಥಾಪನೆಗೆ ಅನುಕೂಲಕಾರಿಯಾಗಿದೆ. ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಇಲ್ಲಿಯೇ ಹಾದು ಹೋಗುತ್ತಿದೆ. ಟೌನ್‍ಶಿಪ್ ನಿರ್ಮಾಣದಿಂದ ಈ ಭಾಗದಲ್ಲಿ ಕೈಗಾರಿಕಾ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ಸಹಕಾರಿಯಾಗಲಿದೆ’ ಎಂದು ನಿರಾಣಿ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.