ADVERTISEMENT

ಈಕ್ವಿಟಿ ಮ್ಯೂಚುವಲ್‌ ಫಂಡ್‌ ಹೂಡಿಕೆ ಇಳಿಕೆ

ಪಿಟಿಐ
Published 8 ಜುಲೈ 2021, 16:03 IST
Last Updated 8 ಜುಲೈ 2021, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈಕ್ವಿಟಿ ಆಧಾರಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿನ ಹೂಡಿಕೆಯ ಪ್ರಮಾಣವು ಶೇ 40ರಷ್ಟು ಇಳಿಕೆ ಆಗಿದೆ. ಜೂನ್‌ನಲ್ಲಿ ₹ 5,988 ಕೋಟಿ ಹೂಡಿಕೆ ಆಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ ತಿಳಿಸಿದೆ.

ಮೇ ತಿಂಗಳಲ್ಲಿ ₹ 10,083 ಕೋಟಿ ಹೂಡಿಕೆ ಆಗಿತ್ತು. ಷೇರುಪೇಟೆಗಳ ಏರುಮುಖ ಚಲನೆಯಿಂದಾಗಿ ಹೂಡಿಕೆದಾರರು ಲಾಭ ಗಳಿಕೆಗೆ ಗಮನ ನೀಡಿದರು. ಇದರಿಂದಾಗಿ ಹೂಡಿಕೆ ಕಡಿಮೆ ಆಗಿದೆ ಎಂದು ಅದು ಹೇಳಿದೆ.

ಏಪ್ರಿಲ್‌ನಿಂದ ಬಂಡವಾಳ ಹೂಡಿಕೆ ಆಗುತ್ತಿರುವುದನ್ನು ಗಮನಿಸಿದರೆ, ಷೇರು ಮಾರುಕಟ್ಟೆ ವಿಚಾರದಲ್ಲಿ ಹೂಡಿಕೆದಾರರ ವಿಶ್ವಾಸ ಮರಳುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಮೇ ತಿಂಗಳಿನಲ್ಲಿ ಹೂಡಿಕೆ ₹ 288 ಕೋಟಿ ಇತ್ತು. ಜೂನ್‌ನಲ್ಲಿ ಇದು ₹ 360 ಕೋಟಿಗೆ ತಲುಪಿದೆ. ಸಾಲಪತ್ರ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ ₹ 3,566 ಕೋಟಿ ಹೂಡಿಕೆ ಆಗಿದೆ. ಮೇನಲ್ಲಿ ₹ 44,512 ಕೋಟಿ ಹೊರಹರಿವು ಕಂಡುಬಂದಿತ್ತು.

ಜೂನ್‌ನಲ್ಲಿ ಒಟ್ಟಾರೆ ಮ್ಯೂಚುವಲ್‌ ಫಂಡ್‌ ಉದ್ಯಮಕ್ಕೆ ₹ 15,320 ಕೋಟಿ ಹೂಡಿಕೆ ಆಗಿದೆ. ಮೇನಲ್ಲಿ ₹ 38,602 ಕೋಟಿ ಹೂಡಿಕೆ ಆಗಿತ್ತು.

ಮ್ಯೂಚುವಲ್‌ ಫಂಡ್‌ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ಮೇನಲ್ಲಿ ₹ 33 ಲಕ್ಷ ಕೋಟಿ ಇದ್ದಿದ್ದು ಜೂನ್‌ನಲ್ಲಿ ದಾಖಲೆಯ ₹ 33.67 ಲಕ್ಷ ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.