ADVERTISEMENT

ಇನ್‌ಫೋಸಿಸ್: ₹ 4,335 ಕೋಟಿ ನಿವ್ವಳ ಲಾಭ

ನೌಕರರ ಬಡ್ತಿ, ವೇತನ ಹೆಚ್ಚಳಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 2:23 IST
Last Updated 21 ಏಪ್ರಿಲ್ 2020, 2:23 IST
ಸಲೀಲ್‌ ಪಾರೇಖ್‌
ಸಲೀಲ್‌ ಪಾರೇಖ್‌   

ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌, 2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 4,335 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 4,074 ಕೋಟಿ ಲಾಭಕ್ಕೆ ಹೋಲಿಸಿದರೆ ಶೇ 6.3 ರಷ್ಟು ಹೆಚ್ಚಳ ಸಾಧಿಸಿದೆ. ಜನವರಿ – ಮಾರ್ಚ್‌ ಅವಧಿಯಲ್ಲಿನ ವರಮಾನವು ಶೇ 8ರಷ್ಟು ಹೆಚ್ಚಳಗೊಂಡು ₹ 23,267 ಕೋಟಿಗೆ ತಲುಪಿದೆ.

ಹಣಕಾಸು ವರ್ಷದಲ್ಲಿನ ಒಟ್ಟಾರೆ ನಿವ್ವಳ ಲಾಭವು ₹ 16,639 ಕೋಟಿಗಳಷ್ಟಾಗಿ ಶೇ 8ರಷ್ಟು ಏರಿಕೆ ದಾಖಲಿಸಿದೆ. ಹಣಕಾಸು ಸೇವೆಗಳ ವರಮಾನವು ಶೇ 9.8ರಷ್ಟು ಹೆಚ್ಚಳ ಕಂಡು ₹ 90,781 ಕೋಟಿಗೆ ತಲುಪಿದೆ.

ADVERTISEMENT

‘ಸದ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಕಂಪನಿಯು ತನ್ನೆಲ್ಲ ಗ್ರಾಹಕರಿಗೆ ನಿರಂತರವಾಗಿ ಸೇವೆ ಒದಗಿಸಿದೆ’ ಎಂದು ಸಿಇಒ ಸಲೀಲ್‌ ಪಾರೇಖ್‌ ತಿಳಿಸಿದ್ದಾರೆ.

ಕೋವಿಡ್‌ ಸೃಷ್ಟಿಸಿರುವ ಅನಿಶ್ಚಿತ ಪರಿಸ್ಥಿತಿ ತಿಳಿಯಾದ ನಂತರವೇ 2020–21ನೇ ಹಣಕಾಸು ವರ್ಷದಲ್ಲಿನ ಕಂಪನಿಯ ವಹಿವಾಟಿನ ಪ್ರಗತಿ ಬಗ್ಗೆ ಮಾಹಿತಿ ನೀಡಲಿದೆ. ಮುಂಬರುವ ದಿನಗಳು ಸವಾಲಿನಿಂದ ಕೂಡಿರಲಿವೆ ಎಂದೂ ತಿಳಿಸಿದೆ.

ಷೇರು ಬೆಲೆ ಹೆಚ್ಚಳ: ಹಣಕಾಸು ಸಾಧನೆ ಪ್ರಕಟಿಸುವ ಮುಂಚೆ ಮುಂಬೈ ಷೇರುಪೇಟೆಯಲ್ಲಿ ಕಂಪನಿಯ ಷೇರುಬೆಲೆ ದಿನದ ಅಂತ್ಯಕ್ಕೆ ಶೇ 3.75ರಷ್ಟು ಏರಿಕೆ ಕಂಡು ₹ 652.90ಕ್ಕೆ ತಲುಪಿತ್ತು.

ಬಡ್ತಿ, ವೇತನ ಹೆಚ್ಚಳಕ್ಕೆ ತಡೆ: ಕೊರೊನಾ ವೈರಾಣು ಪಿಡುಗು ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಕಂಪನಿಯು ಉದ್ಯೋಗಿಗಳ ಬಡ್ತಿ ಮತ್ತು ವೇತನ ಹೆಚ್ಚಳ ನಿರ್ಧಾರವನ್ನು ಸದ್ಯಕ್ಕೆ ಕೈಬಿಟ್ಟಿದೆ. ಹೊಸ ನೇಮಕಾತಿಗೆ ಸಂಬಂಧಿಸಿದ ಕೊಡುಗೆಗಳಿಗೆ ಬದ್ಧವಾಗಿರುವುದಾಗಿ ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.