ADVERTISEMENT

ಇನ್ಫೊಸಿಸ್‌ಗೆ ₹7,969 ಕೋಟಿ ಲಾಭ!

ಪಿಟಿಐ
Published 18 ಏಪ್ರಿಲ್ 2024, 15:57 IST
Last Updated 18 ಏಪ್ರಿಲ್ 2024, 15:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದ ಪ್ರಮುಖ ಐ.ಟಿ ಕಂಪನಿ ಇನ್ಫೊಸಿಸ್‌, 2023–24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಒಟ್ಟು ₹7,969 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹6,128 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 30ರಷ್ಟು ಏರಿಕೆಯಾಗಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ADVERTISEMENT

ವರಮಾನವು ₹37,441 ಕೋಟಿಯಿಂದ ₹37,923 ಕೋಟಿಗೆ ಹೆಚ್ಚಳವಾಗಿದೆ. 2024–25ನೇ ಹಣಕಾಸು ವರ್ಷದಲ್ಲಿ ವರಮಾನವು ಶೇ 1ರಿಂದ ಶೇ3ರಷ್ಟು ಬೆಳವಣಿಗೆ ಆಗಲಿದೆ ಎಂದು ಕಂಪನಿಯು ಅಂದಾಜಿಸಿದೆ.

ಮಾರ್ಚ್‌ಗೆ ಅಂತ್ಯಗೊಂಡ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ₹24,095 ಕೋಟಿಯಿಂದ ₹26,233 ಕೋಟಿಗೆ (ಶೇ 8.9) ಹೆಚ್ಚಳವಾಗಿದೆ. ವಾರ್ಷಿಕ ವರಮಾನವು ₹1.46 ಲಕ್ಷ ಕೋಟಿಯಿಂದ ₹1.53 ಲಕ್ಷ ಕೋಟಿಗೆ ಮುಟ್ಟಿದೆ.

ಪ್ರತಿ ಈಕ್ವಿಟಿ ಷೇರಿಗೆ ₹20 ಅಂತಿಮ ಲಾಭಾಂಶ ಮತ್ತು ಹೆಚ್ಚುವರಿಯಾಗಿ ಪ್ರತಿ ಈಕ್ವಿಟಿ ಷೇರಿಗೆ ₹8 ವಿಶೇಷ ಲಾಭಾಂಶ ನೀಡಲು ಮಂಡಳಿಯು ಶಿಫಾರಸು ಮಾಡಿದೆ. ಕಂಪನಿಯ ಒಟ್ಟು ಒಪ್ಪಂದ ಮೌಲ್ಯವು 2023–24ರಲ್ಲಿ ₹1.47 ಲಕ್ಷ ಕೋಟಿಗೆ ಮುಟ್ಟಿದೆ. ಜರ್ಮನಿಯ ಇನ್‌ ಟೆಕ್‌ನ ಶೇ 100ರಷ್ಟು ಪಾಲನ್ನು ₹4,009 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಕಂಪನಿ ಘೋಷಿಸಿದೆ.

2023–24ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ದೊಡ್ಡ ಒಪ್ಪಂದಕ್ಕೆ ತಲುಪಿದ್ದೇವೆ. ಇದು ಗ್ರಾಹಕರಿಗೆ ನಮ್ಮ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಜನರೇಟಿವ್ ಕೃತಕ ಬುದ್ಧಿಮತ್ತೆಯಲ್ಲಿನ (ಎ.ಐ) ಕಂಪನಿಯ ಸಾಮರ್ಥ್ಯಗಳು ವಿಸ್ತರಿಸುತ್ತಿವೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.