ADVERTISEMENT

ಇನ್ಫೊಸಿಸ್‌ ಲಾಭ ಶೇ 3.2ರಷ್ಟು ಹೆಚ್ಚಳ

ಪಿಟಿಐ
Published 24 ಜುಲೈ 2022, 16:07 IST
Last Updated 24 ಜುಲೈ 2022, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐ.ಟಿ. ಸೇವೆಗಳನ್ನು ನೀಡುವ ದೇಶದ ಎರಡನೇ ಅತಿದೊಡ್ಡ ಕಂಪನಿ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 5,360 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 5,195 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 3.2ರಷ್ಟು ಏರಿಕೆ ಕಂಡಿದೆ.

ವೆಚ್ಚ ಹೆಚ್ಚಾಗುತ್ತಿರುವುದರಿಂದ ಕಾರ್ಯಾಚರಣಾ ಲಾಭ ಕುಸಿತ ಕಂಡಿದೆ. ಇದು ನಿವ್ವಳ ಲಾಭದ ಮೇಲೆ ಪರಿಣಾಮ ಬೀರಿತು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಜನವರಿ–ಮಾರ್ಚ್‌ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 5.7ರಷ್ಟು ಇಳಿಕೆ ಕಂಡುಬಂದಿದೆ. ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ವರಮಾನ ಶೇ 23.6ರಷ್ಟು ಬೆಳವಣಿಗೆ ಕಂಡು ₹ 34,470 ಕೋಟಿಗೆ ತಲುಪಿದೆ. ಕಾರ್ಯಾಚರಣಾ ಲಾಭವು ಶೇ 23.7 ರಿಂದ ಶೇ 20.1ಕ್ಕೆ ಇಳಿಕೆ ಆಗಿದೆ. ಇದೇ ವೇಳೆ ಕಾರ್ಯಾಚರಣಾ ವೆಚ್ಚವು ಶೇ 14.4ಕ್ಕೆ ಏರಿಕೆ ಆಗಿದೆ.

ಅನಿಶ್ಚಿತ ಆರ್ಥಿಕ ಸ್ಥಿತಿಯ ನಡುವೆಯೂ ಮೊದಲ ತ್ರೈಮಾಸಿಕದ ಫಲಿತಾಂಶವು ಒಟ್ಟಾರೆಯಾಗಿ ಉತ್ತಮವಾಗಿದ್ದು, ಕಂಪನಿಯು ಚೇತರಿಕೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನುವುದಕ್ಕೆ ಪುರಾವೆ ಆಗಿದೆ ಎಂದು ಕಂಪನಿಯ ಸಿಇಒ ಸಲೀಲ್‌ ಪಾರೇಖ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.