ADVERTISEMENT

ಇನ್ಫೊಸಿಸ್‌ ನಿವ್ವಳ ಲಾಭ ಶೇ 11.8ರಷ್ಟು ಹೆಚ್ಚಳ

ಪಿಟಿಐ
Published 12 ಜನವರಿ 2022, 16:07 IST
Last Updated 12 ಜನವರಿ 2022, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಐ.ಟಿ. ಕಂಪನಿ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 5,809 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭವು ಶೇಕಡ 11.8ರಷ್ಟು ಹೆಚ್ಚಾಗಿದೆ.

ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ₹ 5,197 ಕೋಟಿ ನಿವ್ವಳ ಲಾಭ ಗಳಿಸಿತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ವರಮಾನವು ₹ 25,927 ಕೋಟಿಯಿಂದ ₹ 31,867 ಕೋಟಿಗೆ (ಶೇ 22.9ರಷ್ಟು) ಹೆಚ್ಚಾಗಿದೆ ಎಂದು ಕಂಪನಿಯು ತಿಳಿಸಿದೆ.

ವಿಪ್ರೊ ಲಾಭ ಅಲ್ಪ ಹೆಚ್ಚಳ: ದೇಶದ ಪ್ರಮುಖ ಐ.ಟಿ. ಕಂಪನಿಗಳ ಪೈಕಿ ಒಂದಾಗಿರುವ ವಿಪ್ರೊ, ಮೂರನೇ ತ್ರೈಮಾಸಿಕದಲ್ಲಿ ₹ 2,969 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹ 2,968 ಕೋಟಿ ನಿವ್ವಳ ಲಾಭ ಗಳಿಸಿತ್ತು.

ADVERTISEMENT

ಕಾರ್ಯಾಚರಣೆ ವರಮಾನವು ₹ 15,670 ಕೋಟಿಯಿಂದ ₹ 20,313 ಕೋಟಿಗೆ (ಶೇ 29.6ರಷ್ಟು) ಹೆಚ್ಚಾಗಿದೆ. ಕಂಪನಿಯು ಪ್ರತಿ ಷೇರಿಗೆ ₹ 1ರ ಮಧ್ಯಂತರ ಲಾಭಾಂಶ ಘೋಷಿಸಿದೆ.

ಕಂಪನಿಯು ಮೂರನೇ ತ್ರೈಮಾಸಿಕದಲ್ಲಿ ಹೊಸದಾಗಿ 10,306 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಇದರಿಂದ ಒಟ್ಟು ಉದ್ಯೋಗಿಗಳ ಸಂಖ್ಯೆಯು 2.31 ಲಕ್ಷಕ್ಕೆ ಏರಿಕೆ ಆಗಿದೆ.

ಟಿಸಿಎಸ್‌ ನಿವ್ವಳ ಲಾಭ ಶೇ 12ರಷ್ಟು ಹೆಚ್ಚಳ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಕಂಪನಿಯ ನಿವ್ವಳ ಲಾಭ ₹ 9,679 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ ಲಾಭಕ್ಕೆ ಹೋಲಿಸಿದರೆ ಶೇ 12.2ರಷ್ಟು ಹೆಚ್ಚಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ₹ 8,701 ಕೋಟಿಯಷ್ಟು ಇತ್ತು.

ಕಂಪನಿಯ ವರಮಾನ ₹ 42,015 ಕೋಟಿಯಿಂದ ₹ 48,885 ಕೋಟಿಗೆ (ಶೇ 16.3ರಷ್ಟು) ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ₹ 18 ಸಾವಿರ ಕೋಟಿ ಮೊತ್ತದ ಷೇರು ಮರುಖರೀದಿಗೆ ಕಂಪನಿಯ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ. ಪ್ರತಿ ಷೇರಿಗೆ ₹ 7 ರಂತೆ ಲಾಭಾಂಶ ಘೋಷಿಸಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ 34 ಸಾವಿರ ಪದವೀಧರರಿಗೆ ಉದ್ಯೋಗ ನೀಡಿದ್ದು, ಇದರಿಂದಾಗಿ ಒಟ್ಟು ಉದ್ಯೋಗಿಗಳ ಸಂಖ್ಯೆಯು 5.56 ಲಕ್ಷಕ್ಕೆ ಏರಿಕೆ ಆಗಿದೆ. ಕಂಪನಿ ತೊರೆಯುತ್ತಿರುವವ ಪ್ರಮಾಣವು ಮೂರನೇ ತ್ರೈಮಾಸಿಕದಲ್ಲಿ ಶೇ 15.3ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.