
ನವದೆಹಲಿ: ಐ.ಟಿ. ಸೇವಾ ವಲಯದಲ್ಲಿ ದೇಶದ ಎರಡನೆಯ ಅತಿದೊಡ್ಡ ಕಂಪನಿಯಾದ ಇನ್ಫೊಸಿಸ್‌ನ ಡಿಸೆಂಬರ್ ತ್ರೈಮಾಸಿಕದ ಲಾಭವು ಶೇ 2.2ರಷ್ಟು ಕಡಿಮೆ ಆಗಿದ್ದು, ₹6,654 ಕೋಟಿಗೆ ತಲುಪಿದೆ.
ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಪರಿಣಾಮವಾಗಿ ಕಂಪನಿಯು ಒಂದು ಬಾರಿಗೆ ₹1,289 ಕೋಟಿ ಮೊತ್ತ ಭರಿಸಬೇಕಾಯಿತು. ಇದು ಲಾಭದ ಪ್ರಮಾಣ ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹6,806 ಕೋಟಿ ಲಾಭ ಗಳಿಸಿತ್ತು.
ಆದರೆ ಈ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವು ಶೇ 8.9ರಷ್ಟು ಹೆಚ್ಚಾಗಿದ್ದು ₹45,479 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಾರ್ಯಾಚರಣೆ ವರಮಾನವು ₹41,764 ಕೋಟಿ ಆಗಿತ್ತು.
ಕಂಪನಿಯು ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ತನ್ನ ವರಮಾನದಲ್ಲಿನ ಏರಿಕೆಯ ಅಂದಾಜನ್ನು ಪರಿಷ್ಕರಿಸಿದ್ದು, ಶೇ 3–3.5ಕ್ಕೆ ಹೆಚ್ಚಿಸಿದೆ. ಇದು ಈ ಮೊದಲು ಶೇ 2–3ರ ಮಟ್ಟದಲ್ಲಿತ್ತು.
ಕಾರ್ಮಿಕ ಸಂಹಿತೆಗಳ ಜಾರಿಯ ಕಾರಣದಿಂದಾಗಿ ಕಂಪನಿಯು ₹2,128 ಕೋಟಿ ‘ಶಾಸನಾತ್ಮಕ ವೆಚ್ಚ’ ಮಾಡಬೇಕಾಯಿತು ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಈ ವಾರದ ಆರಂಭದಲ್ಲಿ ಹೇಳಿತ್ತು. ಎಚ್‌ಸಿಎಲ್ ಟೆಕ್ ಕಂಪನಿಯು ₹719 ಕೋಟಿ ವೆಚ್ಚ ಮಾಡಬೇಕಾಯಿತು.
ಡಿಸೆಂಬರ್ ತ್ರೈಮಾಸಿಕದಲ್ಲಿ ಇನ್ಫೊಸಿಸ್ ಕಂಪನಿಯು ₹43 ಸಾವಿರ ಕೋಟಿ ಮೌಲ್ಯದ ಗುತ್ತಿಗೆಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ ಶೇ 57ರಷ್ಟು ಸಂಪೂರ್ಣವಾಗಿ ಹೊಸ ಗುತ್ತಿಗೆಗಳು.
ಕೃತಕ ಬುದ್ಧಿಮತ್ತೆ ವಲಯದಲ್ಲಿ ಮುಂಚೂಣಿಯಲ್ಲಿ ಇರುವ ಸಾಮರ್ಥ್ಯವು ಕಂಪನಿಗೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಸಿಇಒ ಸಲೀಲ್ ಪಾರೇಖ್, ಇನ್ಫೊಸಿಸ್‌ನ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಎ.ಐ. ಅಳವಡಿಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
‘ನಾವು ಈಗ ಎ.ಐ. ಸಂಬಂಧಿತ 4,600 ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ತಂಡಗಳು ಎ.ಐ. ಬಳಸಿ 2.8 ಕೋಟಿ ಸಾಲುಗಳಷ್ಟು ಕೋಡ್ ಸೃಷ್ಟಿಸಿವೆ’ ಎಂದು ಪಾರೇಖ್ ಅವರು ಹೇಳಿದ್ದಾರೆ.
ಪ್ರಸಕ್ತ ಹಾಗೂ ಮುಂದಿನ ಹಣಕಾಸು ವರ್ಷದಲ್ಲಿ ಕಂಪನಿಯ ಸೇವೆಗಳಿಗೆ ಉತ್ತಮ ಬೇಡಿಕೆ ಇರಲಿದೆ ಎಂದು ಪಾರೇಖ್ ಅಂದಾಜು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.