ನವದೆಹಲಿ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಐ.ಟಿ ಸೇವಾ ಕಂಪನಿ ಇನ್ಫೊಸಿಸ್‌ನ ನಿವ್ವಳ ಲಾಭದಲ್ಲಿ ಇಳಿಕೆಯಾಗಿದೆ.
ಕಂಪನಿಯು ಈ ತ್ರೈಮಾಸಿಕದಲ್ಲಿ ₹7,033 ಕೋಟಿ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹7,969 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 11.7ರಷ್ಟು ಕುಸಿತವಾಗಿದೆ.
ಪೂರ್ಣ ಆರ್ಥಿಕ ವರ್ಷದಲ್ಲಿ ₹1.62 ಲಕ್ಷ ಕೋಟಿ ವರಮಾನ ಗಳಿಸಿದೆ. ವರಮಾನ ಗಳಿಕೆಯಲ್ಲಿ ಶೇ 6.06ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿಯು ಗುರುವಾರ ಷೇರುಪೇಟೆಗೆ ಮಾಹಿತಿ ನೀಡಿದೆ.
‘ಆರ್ಥಿಕ ವರ್ಷದಲ್ಲಿ ವರಮಾನ ಗಳಿಕೆ ಮತ್ತು ಕಾರ್ಯಾಚರಣೆ ವಿಸ್ತರಣೆ ಸದೃಢವಾಗಿದೆ. ಕೃತಕ ಬುದ್ಧಿಮತ್ತೆ, ಕ್ಲೌಡ್, ಡಿಜಿಟಲ್ ತಂತ್ರಜ್ಞಾನದ ಬಲವರ್ಧನೆಗೆ ವೇಗ ಸಿಕ್ಕಿದೆ. ವಹಿವಾಟು ಕೂಡ ಉತ್ತಮವಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಕೇಂದ್ರಿತ ಹಾಗೂ ಮಾರುಕಟ್ಟೆಯ ಬೇಡಿಕೆಗೆ ಸ್ಪಂದಿಸಲು ಒತ್ತು ನೀಡಲಾಗುವುದು’ ಎಂದು ಕಂಪನಿಯ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ.
ಪ್ರತಿ ಷೇರಿಗೆ ಮಧ್ಯಂತರ ಲಾಭಾಂಶ ಸೇರಿ ₹22 ಲಾಭಾಂಶ ನೀಡಲು ಆಡಳಿತ ಮಂಡಳಿಯು ಅನುಮೋದನೆ ನೀಡಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಲಾಭಾಂಶ ನೀಡಿಕೆಯಲ್ಲಿ ಶೇ 13.2ರಷ್ಟು ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.