ADVERTISEMENT

‘ಹೆಚ್ಚಿನ ಮೊತ್ತದ ಕಾರ್ಪೊರೇಟ್‌ ಸಾಲದ ಮೇಲೆ ನಿಗಾಕ್ಕೆ ಸೂಚನೆ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 18:47 IST
Last Updated 27 ಮಾರ್ಚ್ 2023, 18:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ (ರಾಯಿಟರ್ಸ್‌): ಕಾರ್ಪೊರೇಟ್‌ ವಲಯಕ್ಕೆ ಹೆಚ್ಚಿನ ಮೊತ್ತವನ್ನು ಸಾಲವಾಗಿ ನೀಡಿರುವ ಖಾತೆಗಳ ಮೇಲೆ ನಿಗಾ ಇಡುವಂತೆ ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಎಂದು ಬ್ಯಾಂಕಿಂಗ್‌ ಮೂಲಗಳು ಹೇಳಿವೆ.

ಕಾರ್ಪೊರೇಟ್‌ ವಲಯದ ಸಾಲದ ಖಾತೆಗಳ ಮರುಪಾವತಿ ಸಾಮರ್ಥ್ಯದ ಕುರಿತು ಮೌಲ್ಯಮಾಪನ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸುವುದು ಹೆಚ್ಚು ಸೂಕ್ತ ಎಂದು ಕೂಡ ಸರ್ಕಾರವು ಬ್ಯಾಂಕ್‌ಗಳಿಗೆ ಹೇಳಿದೆ.

ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗುತ್ತಿರುವ ಬೆನ್ನಲ್ಲೇ ವಹಿವಾಟಿನ ಮೇಲೆ ಆಗುವ ಪರಿಣಾಮಗಳು ಮತ್ತು ನಗದು ಸಾಮರ್ಥ್ಯ ಕಾಯ್ದುಕೊಳ್ಳುವ ಕುರಿತು ಮೇಲ್ವಿಚಾರಣೆ ನಡೆಸುವಂತೆಯೂ ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅಮೆರಿಕದಲ್ಲಿ ಕೆಲವು ಬ್ಯಾಂಕ್‌ಗಳು ದಿವಾಳಿ ಆಗಿರುವುದು ಜಾಗತಿಕ ಮಟ್ಟದಲ್ಲಿ ಬ್ಯಾಂಕ್‌ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರವಷ್ಟೇ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಅಲ್ಪಾವಧಿ ಮತ್ತು ದೀರ್ಘಾವಧಿಗೆ ಎದುರಾಗುವ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.