ADVERTISEMENT

ಹೂಡಿಕೆದಾರರಿಗೆ ₹ 11.8 ಲಕ್ಷ ಕೋಟಿ ನಷ್ಟ

ಬಡ್ಡಿದರ ಹೆಚ್ಚಳ, ಹಣದುಬ್ಬರ, ಕಚ್ಚಾ ತೈಲ ದರ ಏರಿಕೆ ಪರಿಣಾಮ

​ಪ್ರಜಾವಾಣಿ ವಾರ್ತೆ
Published 7 ಮೇ 2022, 19:30 IST
Last Updated 7 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂಬೈ ಷೇರುಪೇಟೆಯ ವಾರದ ವಹಿವಾಟು ಕರಡಿ ಕುಣಿತಕ್ಕೆ ಒಳಗಾಗಿ ಶೇ 3.89ರಷ್ಟು ಕುಸಿತ ಕಂಡಿತು. ಇದರಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 11.8 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಒಟ್ಟಾರೆ ಮಾರುಕಟ್ಟೆ ಬಂಡವಾಳ ಮೌಲ್ಯ ₹ 255.17 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ರಷ್ಯಾ–ಉಕ್ರೇನ್‌ ಬಿಕ್ಕಟ್ಟು, ಹಣದುಬ್ಬರ, ವಿದೇಶಿ ಬಂಡವಾಳ ಹೊರಹರಿವು, ವಿವಿಧ ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಏರಿಕೆ, ರೂಪಾಯಿ ಮೌಲ್ಯ ಇಳಿಕೆ ಹಾಗೂ ಕಚ್ಚಾ ತೈಲ ದರ ಏರಿಕೆಯ ಕಾರಣಗಳಿಂದಾಗಿ ದೇಶಿ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಏಪ್ರಿಲ್‌ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿದೆ. ಇದರ ಜೊತೆಗೆ ತಯಾರಿಕಾ ವಲಯದ ಬೆಳವಣಿಗೆ ಮತ್ತು ವಾಹನ ಮಾರಾಟದ ಅಂಕಿ–ಅಂಶಗಳು ದೇಶದ ಆರ್ಥಿಕತೆಯು ಚೇತರಿಕೆ ಕಂಡುಕೊಳ್ಳುತ್ತಿದೆ ಎನ್ನುವುದನ್ನು ಸೂಚಿಸುತ್ತಿವೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ADVERTISEMENT

ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಅಂಕಿ–ಅಂಶವು ಹೆಚ್ಚು ಪರಿಣಾಮ ಉಂಟುಮಾಡಲಿದೆಸದ್ಯದ ಪರಿಸ್ಥಿತಿಯಲ್ಲಿ, ಹಣದುಬ್ಬರದ ಪರಿಣಾಮಕ್ಕೆ ಒಳಗಾಗದೇ ಇರುವಂತಹ ಬ್ಯಾಂಕಿಂಗ್‌, ಐ.ಟಿ., ಔಷಧ ವಲಯಗಳಲ್ಲಿ ವಹಿವಾಟಿಗೆ ಗಮನ ಹರಿಸುವುದು ಹೆಚ್ಚು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ.

ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು (ಕೋಟಿಗಳಲ್ಲಿ)

ಮೇ 2; ₹ 1,853

ಮೇ 4; ₹ 3,288

ಮೇ 5; ₹ 2,075

ಮೇ 6; ₹ 5,517

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.