ADVERTISEMENT

ಸಿಗರೇಟ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳ ಪ್ರಸ್ತಾವ: ಐಟಿಸಿ ಷೇರು ಕುಸಿತ

ಪಿಟಿಐ
Published 3 ಫೆಬ್ರುವರಿ 2020, 11:37 IST
Last Updated 3 ಫೆಬ್ರುವರಿ 2020, 11:37 IST
   

ಮುಂಬೈ: ಸಿಗರೇಟ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವ ಪ್ರಸ್ತಾವವನ್ನು ಹಣಕಾಸು ಸಚಿವರು ಸಂಸತ್ತಿನ ಗಮನಕ್ಕೆ ತಂದ ನಂತರ ಸತತ ಕುಸಿತದತ್ತ ಜಾರಿದ್ದ ದೇಶದ ಪ್ರಮುಖ ಸಿಗರೇಟ್ ತಯಾರಿಕಾ ಕಂಪನಿ ಐಟಿಸಿ ಷೇರು ಮೌಲ್ಯ ಸೋಮವಾರ ವರ್ಷದಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಮುಂಬೈ ಷೇರು ವಹಿವಾಟು ಕೇಂದ್ರದಲ್ಲಿ ಐಟಿಸಿ ಷೇರುಗಳು 11 ಅಂಕಗಳು ಅಥವಾ ಶೇ 5ರಷ್ಟು ಕುಸಿದು₹ 208ಕ್ಕೆ ಮಾರಾಟವಾದವು. ಇದೇ ಕ್ಷೇತ್ರದಲ್ಲಿರುವ ವಿಎಸ್‌ಟಿ ಸ್ಲಿಡ್ ಶೇ 1.4ರಷ್ಟು ಕುಸಿದು ₹ 4151ಕ್ಕೆ, ಗಾಡ್‌ಫ್ರೆ ಫಿಲಿಪ್ ಶೇ 0.8ರಷ್ಟು ಕುಸಿದು ₹ 1,125 ತಲುಪಿದವು.

‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಶುಲ್ಕದ ಮೂಲಕ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳಮೇಲೆ ಅಬಕಾರಿ ಸುಂಕ ವಿಧಿಸಲು ಪ್ರಸ್ತಾಪಿಸುತ್ತೇನೆ. ಆದರೆ ಬೀಡಿ ಮೇಲಿನ ತೆರಿಗೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ADVERTISEMENT

ಬಜೆಟ್ ಮಂಡನೆಯಾದ ಶನಿವಾರ ಐಟಿಸಿ ಷೇರುಗಳು ಶೇ 7ರಷ್ಟು ಕುಸಿದಿತ್ತು. ಸೋಮವಾರ ಶೇ 5ರಷ್ಟು ಕುಸಿಯುವುದರೊಂದಿಗೆ ಕೇವಲ ಎರಡೇ ದಿನಗಳ ವಹಿವಾಟಿನಲ್ಲಿ ಷೇರು ಮೌಲ್ಯ ಒಟ್ಟು ಶೇ 12ರಷ್ಟು ಕುಸಿದಂತೆ ಆಗಿದೆ.

ಹಲವು ಗ್ರಾಹಕ ಉತ್ಪನ್ನಗಳನ್ನೂ ಹೊಂದಿರುವ ಐಟಿಸಿ ಕಂಪನಿಯು ಸಿಗರೇಟ್ ಮಾರಾದ ಮೂಲಕ ಶೇ 44ರಷ್ಟು ಆದಾಯಗಳಿಸುತ್ತಿದೆ.

ಸೋಮವಾರ ಷೇರು ಸಂವೇದಿ ಸೂಚ್ಯಂಕವು 136 ಅಂಶಗಳ(ಶೇ 0.3) ಏರಿಕೆ ದಾಖಲಿಸಿ 39,872 ಆಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 46 ಅಂಶಗಳ ಏರಿಕೆ ದಾಖಲಿಸಿ 11,708ರಲ್ಲಿ ದಿನದ ವಹಿವಾಟು ಮುಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.