ADVERTISEMENT

ಜೆಮ್‌ಶೆಡ್‌ಜಿ ಟಾಟಾ ಶತಮಾನದ ಮಹಾದಾನಿ

ಪಿಟಿಐ
Published 23 ಜೂನ್ 2021, 16:36 IST
Last Updated 23 ಜೂನ್ 2021, 16:36 IST
ಜೆಮ್‌ಶೆಡ್‌ಜಿ ಟಾಟಾ ಅವರ ಪ್ರತಿಮೆ
ಜೆಮ್‌ಶೆಡ್‌ಜಿ ಟಾಟಾ ಅವರ ಪ್ರತಿಮೆ   

ಮುಂಬೈ: ಭಾರತದ ಉದ್ಯಮ ರಂಗದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡು ಅತಿದೊಡ್ಡ ದಾನಿ ಎಂದು ಹರೂನ್ ಮತ್ತು ಎಡೆಲ್‌ಗಿವ್‌ ಪ್ರತಿಷ್ಠಾನ ಹೇಳಿವೆ. ಈ ಎರಡೂ ಸಂಸ್ಥೆಗಳು ಜಂಟಿಯಾಗಿ ಐವತ್ತು ಜನ ಅತಿದೊಡ್ಡ ದಾನಿಗಳ ಪಟ್ಟಿಯನ್ನು ಸಿದ್ಧಪಡಿಸಿವೆ.

ಜೆಮ್‌ಶೆಡ್‌ಜಿ ಟಾಟಾ ಅವರು ದಾನವಾಗಿ ನೀಡಿದ ಹಣದ ಮೊತ್ತ 102 ಬಿಲಿಯನ್ ಡಾಲರ್ (₹ 7.56 ಲಕ್ಷ ಕೋಟಿ). ಭಾರತದ ಟಾಟಾ ಉದ್ಯಮ ಸಮೂಹವನ್ನು ಸ್ಥಾಪಿಸಿದವರು ಜೆಮ್‌ಶೆಡ್‌ಜಿ ಟಾಟಾ. ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಜೆಮ್‌ಶೆಡ್‌ಜಿ ಅವರು ಉದ್ಯಮಿಗಳಾದ ಬಿಲ್ ಗೇಟ್ಸ್, ವಾರೆನ್ ಬಫೆಟ್, ಜಾರ್ಜ್‌ ಸಾರೋಸ್ ಮತ್ತು ಜಾನ್‌ ಡಿ. ರಾಕ್‌ಫೆಲ್ಲರ್‌ ಅವರಿಗಿಂತ ಮುಂದಿದ್ದಾರೆ.

‘ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಅಮೆರಿಕ ಹಾಗೂ ಯುರೋಪಿನ ದಾನಿಗಳು ಕಳೆದ ಶತಮಾನದಲ್ಲಿ ಹೆಚ್ಚು ಪ್ರಭಾವಿಗಳಾಗಿದ್ದಿರಬಹುದು. ಆದರೆ, ಭಾರತದ ಟಾಟಾ ಸಮೂಹದ ಸ್ಥಾಪಕ ಆಗಿರುವ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡ ಅತಿದೊಡ್ಡ ದಾನಿ’ ಎಂದು ಹರೂನ್‌ನ ಮುಖ್ಯ ಸಂಶೋಧಕ ಹಾಗೂ ಅಧ್ಯಕ್ಷ ರುಪರ್ಟ್‌ ಹೂಗ್‌ವರ್ಫ್‌ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಜೆಮ್‌ಶೆಡ್‌ಜಿ ಅವರು 1892ರಲ್ಲಿಯೇ ದಾನ ನೀಡಲು ಆರಂಭಿಸಿದ್ದರು. ದಾನಿಗಳ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಬ್ಬ ಭಾರತೀಯ ವಿಪ್ರೊ ಕಂಪನಿ ಅಜೀಂ ಪ್ರೇಮ್‌ಜಿ ಅವರು. ಐವತ್ತು ಜನ ದಾನಿಗಳ ಪಟ್ಟಿಯಲ್ಲಿ 38 ಜನ ಅಮೆರಿಕದವರು, ಐವರು ಬ್ರಿಟನ್ನಿನವರು, ಮೂವರು ಚೀನಾ ದೇಶದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.