ADVERTISEMENT

ವಾಹನ ಮಾರಾಟಕ್ಕೆ ಮುಳುವಾದಜಿಎಸ್‌ಟಿ, ನೋಟು ರದ್ದತಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 18:30 IST
Last Updated 29 ಏಪ್ರಿಲ್ 2019, 18:30 IST
   

ನವದೆಹಲಿ: ನೋಟು ರದ್ದತಿ, ಜಿಎಸ್‌ಟಿ ಜಾರಿ, ಥರ್ಡ್‌ ಪಾರ್ಟಿ ವಿಮೆ ನಿಯಮದಲ್ಲಿ ಬದಲಾವಣೆ ಮತ್ತು ಬಿಎಸ್‌–4 ಮಾನದಂಡದಂತಹ ನೀತಿಗಳಿಂದ ಕರ್ನಾಟಕದಲ್ಲಿ ವಾಹನ ಮಾರಾಟ ಭಾರಿ ಇಳಿಕೆ ಕಂಡಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಜನರು ವಾಹನ ಖರೀದಿಸದೇ ಇರಲು ಬ್ಯಾಂಕ್‌ ಸಾಲ ತುಟ್ಟಿಯಾಗಿರುವುದು ಕಾರಣ ಆಗಿಲ್ಲ.ಕೆಲವು ಪ್ರಮುಖ ನೀತಿಗಳಿಂದಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಮಾರಾಟಕ್ಕೆ ಪೆಟ್ಟು ಬಿದ್ದಿದೆ ಎಂದು ವರದಿಯಲ್ಲಿ ತಿಳಿಸಿದೆ.

ಬೆಂಗಳೂರು ನಗರ, ಬೆಳಗಾವಿ, ಕಲಬುರ್ಗಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿನ ವಾಹನ ನೋಂದಣಿ ಮಾಹಿತಿ ಪರಿಗಣಿಸಿ ಈ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿನ ಒಟ್ಟಾರೆ ವಾಹನ ಮಾರಾಟದಲ್ಲಿ ಈ ಐದು ಜಿಲ್ಲೆಗಳ ಪಾಲು ಶೇ 80ರಷ್ಟಿದೆ.

ADVERTISEMENT

ನೋಟು ರದ್ದತಿಗೂ ಮುನ್ನ ದ್ವಿಚಕ್ರವಾಹನ ಮಾರಾಟ ಶೇ 11.5ರಂತೆ ಪ್ರಗತಿ ಕಂಡಿತ್ತು. ಆದರೆ, ನೋಟು ರದ್ದತಿ ಬಳಿಕ ಬೆಳವಣಿಗೆ ಪ್ರಮಾಣ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ರಾಜ್ಯದ ಮಟ್ಟದಲ್ಲಿಯೂ ಶೇ 8ಕ್ಕೆ ಇಳಿಕೆಯಾಗಿದೆ.

ನಾಲ್ಕು ವಾಹನಗಳ ನೋಂದಣಿ 2016ರಲ್ಲಿ ಶೇ 12ರಷ್ಟಿತ್ತು. ಇದು 2019ರ ಮೊದಲ ನಾಲ್ಕು ತಿಂಗಳಿನಲ್ಲಿ ಶೇ 8ಕ್ಕೆ ಇಳಿಕೆಯಾಗಿದೆ.

ನೋಟು ರದ್ದತಿಯಿಂದ ಮಾರಾಟದಲ್ಲಿ ಶೇ 2ರಷ್ಟು ಇಳಿಕೆ ಆಗಿದ್ದರೆ, ಜಿಎಸ್‌ಟಿಯಿಂದ ಶೇ 1ರಷ್ಟು ಮತ್ತು ಥರ್ಡ್‌ ಪಾರ್ಟಿ
ವಿಮೆ ನಿಯಮದಲ್ಲಿನ ಬದಲಾವಣೆಯಿಂದ ಮಾರಾಟದಲ್ಲಿ ಶೇ 1ರಷ್ಟು ಇಳಿಕೆ ಆಗಿದೆ.

ಕಚ್ಚಾ ತೈಲ ದರ ಗರಿಷ್ಠ ಮಟ್ಟದಲ್ಲಿರುವುದು ಸಹ ಭಾರಿ ಪ್ರಮಾಣದಲ್ಲಿ ವಾಹನಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಆದರೆ, ಬ್ಯಾಂಕ್‌ಗಳ ಸಾಲ ಹೆಚ್ಚಿನ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.