ನವದೆಹಲಿ: ‘ಅಂತರ್ಜಾಲದಲ್ಲಿ ನಿರ್ವಹಿಸುವ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ–ನಾಮ್) ವ್ಯವಸ್ಥೆಗೆ ಕರ್ನಾಟಕದ ಎರಡು ಮಂಡಿಗಳು ಶೀಘ್ರದಲ್ಲಿಯೇ ಸೇರ್ಪಡೆಯಾಗಲಿವೆ’ ಎಂದು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
‘ಎರಡು ಮಂಡಿಗಳಲ್ಲಿ ಒಂದು ಕಲಬುರ್ಗಿಯ ಚಿಂಚೋಳಿ ತಾಲ್ಲೂಕಿನ ಮಂಡಿಯಾಗಿರಲಿದೆ. ಸದ್ಯಕ್ಕೆ ರಾಜ್ಯದಲ್ಲಿ 164 ಎಪಿಎಂಸಿ ಮಂಡಿಗಳಿವೆ. ಇದರಲ್ಲಿ 162 ‘ಆರ್‌ಇಎಂಎಸ್’ಗೆ ಸಂಪರ್ಕ ಹೊಂದಿವೆ. ಇನ್ನೆರಡನ್ನು ಇ–ನಾಮ್‌ಗೆ ಸಂಪರ್ಕಿಸಲಾಗುವುದು.ಕರ್ನಾಟಕದಲ್ಲಿರುವ ವ್ಯವಸ್ಥೆಗಿಂತಲೂ ಹೆಚ್ಚಿನ ವೈಶಿಷ್ಟ್ಯ ಮತ್ತು ಸೇವೆಗಳನ್ನುಇ–ನಾಮ್ ಹೊಂದಿದೆ’ ಎಂದು ಹೇಳಿದ್ದಾರೆ.
‘ಕೃಷಿ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ತನ್ನದೇ ಆದ ವ್ಯವಸ್ಥೆ ರೂಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. 2014–15ರಲ್ಲಿ ರಾಷ್ಟ್ರೀಯ ಇ–ಮಾರುಕಟ್ಟೆ ಸೇವೆಗಳ ಮೂಲಕ (ಆರ್‌ಇಎಂಎಸ್) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸ್ಥಾಪಿಸಲಾಯಿತು. ಸದ್ಯ 162 ಮಂಡಿಗಳಲ್ಲಿ ಈ ವ್ಯವಸ್ಥೆ ಇದೆ.
ರೈತರಿಗೆ ನ್ಯಾಯಯುತ ಬೆಲೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರ ಏಪ್ರಿಲ್‌ನಿಂದ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಕಾರ್ಯಗತಗೊಳಿಸಿದೆ. ಇದೊಂದು ಅಂತರ್ಜಾಲ ಆಧಾರಿತ ಕೃಷಿ ಮಾರುಕಟ್ಟೆ ತಾಣವಾಗಿದೆ.
ಕೃಷಿ ಉತ್ಪನ್ನಗಳನ್ನು ರಾಜ್ಯದ ಒಳಗೆ ಮತ್ತು ಅಂತರ ರಾಜ್ಯ ವಹಿವಾಟಿಗೆ ಮಾರಾಟ ಮಾಡಲು ಇದು ನೆರವಾಗಲಿದೆ. ಎಲ್ಲ ಮಂಡಿಗಳಲ್ಲಿನ ಬೆಲೆ ಮತ್ತು ಹರಾಜು ಪ್ರಕ್ರಿಯೆ ವಿವರಗಳನ್ನು ಬೆರಳತುದಿಯಲ್ಲಿ ಪಡೆದುಕೊಳ್ಳುವ ರೈತರು ತಮ್ಮ ಉತ್ಪನ್ನಕ್ಕೆ ಉತ್ತಮ ಬೆಲೆ ಪಡೆಯಲಿದ್ದಾರೆ.
2021–22ರಲ್ಲಿ ಇ–ನಾಮ್‌ಗೆ 22 ಸಾವಿರ ಕೃಷಿ ಮಂಡಿಗಳನ್ನು ಜೋಡಿಸಲು ಕೇಂದ್ರ ಕೃಷಿ ಸಚಿವಾಲಯ ನಿರ್ಧರಿಸಿದೆ. ಸದ್ಯ 585 ಕೃಷಿ ಮಂಡಿಗಳು ಇ–ನಾಮ್‌ಗೆ ಸಂಪರ್ಕ ಹೊಂದಿವೆ. ಕೃಷಿ ವಲಯದ ಬೆಳವಣಿಗೆಗೆ ಮತ್ತು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.