ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ಪರಿಹಾರಕ್ಕೆ ಕಾಸಿಯಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮೇ 2021, 15:22 IST
Last Updated 10 ಮೇ 2021, 15:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದ ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು ಎಂದು ಕರ್ನಾಟಕ ಸಣ್ಣ ಉದ್ಯಮಗಳ ಒಕ್ಕೂಟ (ಕಾಸಿಯಾ) ಒತ್ತಾಯಿಸಿದೆ. ‘ಈ ವರ್ಗದ ಉದ್ಯಮಗಳ ಹಿತ ಕಾಯಲು ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ನಿಗದಿತ ವಿದ್ಯುತ್ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು’ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಆಗ್ರಹಿಸಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳ ಮಾಸಿಕ ವಿದ್ಯುತ್ ಬಿಲ್ ಮೊತ್ತವನ್ನು ಬಡ್ಡಿ ಹಾಗೂ ದಂಡರಹಿತವಾಗಿ ಪಾವತಿಸಲು ಜೂನ್‌ವರೆಗೆ ಅವಕಾಶ ನೀಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

‘ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, 24 ಗಂಟೆ ಕಾರ್ಯ ನಿರ್ವಹಿಸುವ ಕೈಗಾರಿಕೆಗಳ ಮಾಲೀಕರು ಮತ್ತು ಅವುಗಳ ಕಾರ್ಮಿಕರ ಸಂಚಾರಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ, ಅವರ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಪೊಲೀಸರ ಇಂತಹ ಕ್ರಮದಿಂದಾಗಿ ಸರ್ಕಾರ ಅನುಮತಿ ನೀಡಿದ್ದರೂ ಕೈಗಾರಿಕೋದ್ಯಮಿಗಳು ಘಟಕಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಅರಸಪ್ಪ ಅವರು ದೂರಿದ್ದಾರೆ.

ADVERTISEMENT

‘ಹಿಂದಿನ ಬಾರಿ ಜಾರಿಗೆ ತಂದ ಲಾಕ್‌ಡೌನ್‌ನಿಂದಾಗಿ ಅಂದಾಜು ಶೇಕಡ 20ರಷ್ಟು ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳು ರಾಜ್ಯದಲ್ಲಿ ಈಗಾಗಲೇ ಮುಚ್ಚಿವೆ. ಈಗ ಮತ್ತೆ ಲಾಕ್‌ಡೌನ್‌ಜಾರಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ಘೋಷಿಸದಿದ್ದರೆ ಶೇಕಡ 25ರಿಂದ ಶೇ 30ರಷ್ಟು ಕೈಗಾರಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.