ಬೆಂಗಳೂರು: ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ (ಎಂಎಸ್‌ಎಂಇ) ಕಾರ್ಯಾಚರಣೆ ವೆಚ್ಚ ಹೆಚ್ಚಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ವಿಶೇಷ ಆರ್ಥಿಕ ಕೊಡುಗೆ ನೀಡದಿದ್ದರೆ ಇವುಗಳಿಗೆ ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ಟವಾಗಲಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹೇಳಿದೆ.
ಸಣ್ಣ ಗಾತ್ರದ ಉದ್ಯಮಗಳಲ್ಲಿ ಬಳಸುವ ಕಚ್ಚಾಸಾಮಗ್ರಿಗಳ ದರವು ಒಂದು ವರ್ಷದಲ್ಲಿ ತೀವ್ರ ಏರಿಕೆ ಕಂಡಿದೆ. ಆದರೆ, ಉತ್ಪನ್ನಗಳನ್ನು ಖರೀದಿ ಮಾಡುವವರು ಈ ದರ ಏರಿಕೆಯ ಅಷ್ಟೂ ಹೊರೆ ಹೊತ್ತುಕೊಳ್ಳಲು ಸಿದ್ಧರಿಲ್ಲ. ಇದು ಕೈಗಾರಿಕೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಮ್ಲಜನಕದ ಬೇಡಿಕೆ ಹೆಚ್ಚಾಗಿದ್ದರಿಂದ ಸರ್ಕಾರವು ಕೈಗಾರಿಕೆಗಳಿಗೆ ಆಮ್ಲಜನಕ ವಿತರಣೆಯನ್ನು ಗಣನೀಯವಾಗಿ ತಗ್ಗಿಸಿದೆ. ಪ್ರತಿ ದಿನವೂ 60 ಟನ್ ಆಮ್ಲಜನಕದ ಅಗತ್ಯವಿದೆ. ಆದರೆ, ಸಿಗುತ್ತಿರುವುದು 20 ಟನ್ ಮಾತ್ರ. ಖಾಸಗಿ ಪೂರೈಕೆದಾರರು ಪ್ರತಿ ಕೆ.ಜಿ. ಆಮ್ಲಜನಕದ ದರವನ್ನು ಶೇಕಡ 170ರಷ್ಟು ಏರಿಸಿದ್ದಾರೆ. ಮೊದಲು ಕೆ.ಜಿ.ಗೆ ₹ 15 ಇದ್ದ ದರವು ಈಗ ₹ 40 ಆಗಿದೆ. ಇದು ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆ ತಂದೊಡ್ಡಿದೆ’ ಎಂದು ಎಂದು ಪೀಣ್ಯದಲ್ಲಿ ಮೆಟಲ್ ಕಟಿಂಗ್ ಮತ್ತು ಫ್ಯಾಬ್ರಿಕೇಷನ್ ಘಟಕ ಹೊಂದಿರುವ ಎಸ್.ಕೆ. ಷಣ್ಮುಖಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಉದ್ಯೋಗ ನಷ್ಟ: ‘ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ಅತಿಸಣ್ಣ ಮತ್ತು ಸಣ್ಣ ಪ್ರಮಾಣದ ಶೇಕಡ 25ರಿಂದ ಶೇ 30ರಷ್ಟು ಕೈಗಾರಿಕೆಗಳು ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಇದೆ. ಇದರಿಂದಾಗಿ ಸುಮಾರು 15 ಲಕ್ಷದಿಂದ 20 ಲಕ್ಷ ಉದ್ಯೋಗ ನಷ್ಟವಾಗುತ್ತದೆ ಎಂಬ ಅಂದಾಜು ಮಾಡಲಾಗಿದೆ’ ಎಂದು ಅರಸಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.