ADVERTISEMENT

ಹೊಸ ಉದ್ದಿಮೆದಾರರನ್ನು ನಿರ್ಲಕ್ಷಿಸಿದ ಕೆಎಸ್‌ಎಫ್‌ಸಿ

ಉದ್ದಿಮೆದಾರರ ಸಮಾವೇಶ: ಹಳೆ ಉದ್ದಿಮೆದಾರರಿಗೆ ಮಣೆ ಹಾಕಿದ ಅಧಿಕಾರಿಗಳು

ಮಲ್ಲೇಶ್ ನಾಯಕನಹಟ್ಟಿ
Published 25 ಜನವರಿ 2019, 19:45 IST
Last Updated 25 ಜನವರಿ 2019, 19:45 IST
ಯಾದಗಿರಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಶುಕ್ರವಾರ ಕೆಎಸ್‌ಎಫ್‌ಸಿ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಮಾವೇಶದಲ್ಲಿ ಕೇವಲ ಮೂವರು ಮಹಿಳೆಯರು ಭಾಗವಹಿಸಿದ್ದರು
ಯಾದಗಿರಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಶುಕ್ರವಾರ ಕೆಎಸ್‌ಎಫ್‌ಸಿ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಮಾವೇಶದಲ್ಲಿ ಕೇವಲ ಮೂವರು ಮಹಿಳೆಯರು ಭಾಗವಹಿಸಿದ್ದರು   

ಯಾದಗಿರಿ: ಕೆಎಸ್‌ಎಫ್‌ಸಿ ಜಿಲ್ಲಾ ಶಾಖೆ ನಗರದದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಮಾವೇಶದಲ್ಲಿ ಹೊಸ ಉದ್ದಿಮೆದಾರರೇ ಇರಲಿಲ್ಲ. ಖಾಸಗಿ ಹೋಟೆಲ್‌ವೊಂದರ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಅಧಿಕಾರಿಗಳು ಹಳೆಯ ಉದ್ದಿಮೆದಾರರಿಗೆ ಮಣೆ ಹಾಕಿದ್ದರು. ಅವರೂ ಸಹ ಕೇವಲ ಹತ್ತಾರು ಮಂದಿ ಮಾತ್ರ ಇದ್ದರು!

ಸಮಾವೇಶಕ್ಕೆ ಬಂದಿದ್ದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ (ವೃತ್ತ–4)ರ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕ ಶಿವಾನಂದ ಪಾಟೀಲ್ ಸಾಲಯೋಜನೆಗಳ ಬಗ್ಗೆ ಸಲಹೆ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆ ವಲಯ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನು ಕೂಡ ವಿಸ್ತರಿಸಿ ಹೇಳಲಿಲ್ಲ. ಹೊಸ ಉದ್ದಿಮೆದಾರರ ಕೊರತೆ ಅವರ ಭಾಷಣ ಚುಟುಕುಗೊಳಿಸಿತು. ಹಣಕಾಸು ಸಂಸ್ಥೆಯ ಲಾಭ, ನಿವ್ವಳ ಬಂಡವಾಳ, ಗುರಿ, ಸಾಧನೆಗಳನ್ನು ಮೆಲುಕು ಹಾಕಿ ಸುಖಾಸೀನರಾದರು.

ನಿರುದ್ಯೋಗಿ ಯುವಕರಿಗಿಲ್ಲ ಮಾಹಿತಿ:
ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಅಂಕಿಸಂಖ್ಯೆಯ ಪ್ರಕಾರ ಜಿಲ್ಲೆಯಲ್ಲಿ ಸದ್ಯ 5,000 ನಿರುದ್ಯೋಗಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಯಾವುದೇ ಸಾಲ ಯೋಜನೆಗಳು ಸಿಕ್ಕರೆ ಸ್ವ ಉದ್ಯೋಗ ನಡೆಸಿ ಬದುಕು ಕಟ್ಟಿಕೊಳ್ಳುವವರು ಈ ಪಟ್ಟಿಯಲ್ಲಿ ಸಾಕಷ್ಟು ಯುವಜನರಿದ್ದಾರೆ. ಈ ಯುವಜನರಿಗೆ ದಾರಿ ತೋರಿಸಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಲವು ಜಿಲ್ಲಾಮಟ್ಟದ ಉದ್ಯೋಗ ಮೇಳ ನಡೆಸುತ್ತಾ ಬಂದಿದೆ. ಮೇಳದಲ್ಲಿ ಭಾಗವಹಿಸುವ ಖಾಸಗಿ ಕಂಪೆನಿಗಳು ಮಾತ್ರ ನಿರೀಕ್ಷೆಯಂತೆ ಜಿಲ್ಲೆಯ ಇರುದ್ಯೋಗಿ ಯುವಜನರಿಗೆ ಉದ್ಯೋಗ ಕಲ್ಪಿಸಿಲ್ಲ. ಸಮಾವೇಶದ ಸುದ್ದಿ ಈ ಯುವಜನರಿಗೆ ಮುಟ್ಟಿಸಿದ್ದರೆ ಸಮಾವೇಶಕ್ಕೊಂದು ಸಾರ್ಥಕತೆ ಸಿಗುತ್ತಿತ್ತು ಎಂಬುದಾಗಿ ಅಲ್ಲಿದ್ದ ಕೆಲ ಹಳೆ ಉದ್ದಿಮೆದಾರರೇ ಮಾತನಾಡಿಕೊಳ್ಳುತ್ತಿದ್ದರು.

ADVERTISEMENT

ಪರಿಶಿಷ್ಟ ಫಲಾನುಭವಿಗಳಿಗೆ ಸಿಗದ ಮಾಹಿತಿ: ಹಣಕಾಸು ಸಂಸ್ಥೆ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಆಕರ್ಷಕ ಸಾಲಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸ್ವತಃ ಕೆಎಸ್‌ಎಫ್‌ಸಿ ಪ್ರಧಾನ ವ್ಯವಸ್ಥಾಪಕರೇ ವಿವಿಧ ಸಾಲಯೋಜನೆ, ಬಡ್ಡಿದರ ಕುರಿತು ಮಾಹಿತಿ ನೀಡಿದರು. ಮೊದಲ ಪೀಳಿಗೆ ಉದ್ಯಮಿಗಳಿಗೆ ಇರುವ ಅವಕಾಶ ಹಾಗೂ ಉದ್ಯಮಿಗಳಿಗೆ ಇರುವ ಪೂರಕ ಭದ್ರತಾ ನಿಧಿ ಯೋಜನೆ ಕುರಿತು ಮಾಹಿತಿ ಒದಗಿಸಿದರು. ಆದರೆ, ಪರಿಶಿಷ್ಟ ಸಮುದಾಯಗಳ ಆಸಕ್ತ ಉದ್ಯಮಿಗಳು, ನಿರುದ್ಯೋಗಿ ಯುವಜನರು ಮಾಹಿತಿ ಕೊರತೆಯಿಂದಾಗಿ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ.

ಮಹಿಳಾ ಸೌಲಭ್ಯದ ಬಗ್ಗೆ ಉದ್ದುದ್ದ ಭಾಷಣ!

ಮಹಿಳೆಯರೇ ಇಲ್ಲದ ಉದ್ಯಮಿಗಳ ಸಮಾವೇಶದಲ್ಲಿ ಅಧಿಕಾರಿಗಳು ಮಹಿಳಾ ಉದ್ಯಮಿಗಳ ಸಾಲಯೋಜನೆ ಬಗ್ಗೆ ಉದ್ದುದ್ದ ಭಾಷಣ ಬಿಗಿದರು!

ಸಣ್ಣ, ಮಧ್ಯಮ, ಸೇವಾ ಕ್ಷೇತ್ರಗಳ ಘಟಕಗಳ ಸ್ಥಾಪನೆಗೆ ಹಾಗೂ ವಿಸ್ತರಣೆ, ನವೀಕರಣಕ್ಕಾಗಿ ಶೇ 4ರಷ್ಟು ಬಡ್ಡಿ ದರದಲ್ಲಿ ಕನಿಷ್ಠ ₹5 ಲಕ್ಷದಿಂದ ₹2 ಕೋಟಿ ಹಣಕಾಸಿನ ನೆರವು ಮತ್ತು ಇದಕ್ಕೆ ಸರ್ಕಾರದಿಂದ ಶೇ10ರಷ್ಟು ಬಡ್ಡಿ ಸಹಾಯಧನ ಇರುವುದಾಗಿ ಅಧಿಕಾರಿ ಸಮಾವೇಶದಲ್ಲಿ ಮಾಹಿತಿ ನೀಡುವಾಗ ಕೇವಲ ಮೂವರು ಮಹಿಳೆಯರು ಮಾತ್ರ ಇದ್ದರು!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿಅಂಶದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 3,257 ಸ್ತ್ರೀಶಕ್ತಿ ಸಂಘಗಳಿವೆ. ಯಾದಗಿರಿ ತಾಲ್ಲೂಕಿನಲ್ಲಿ 422, ಸುರಪುರ ತಾಲ್ಲೂಕಿನಲ್ಲಿ 1,228, ಶಹಾಪುರ ತಾಲ್ಲೂಕಿನಲ್ಲಿ 466, ಗುರುಮಠಕಲ್‌ ತಾಲ್ಲೂಕಿನಲ್ಲಿ 641 ಸ್ತ್ರೀಶಕ್ತಿ ಸಂಘಗಳಿವೆ. ಅವುಗಳಲ್ಲಿ ಒಟ್ಟು 40 ಸಾವಿರ ಮಹಿಳೆಯರು ಸಕ್ರಿಯರಾಗಿದ್ದಾರೆ. ಇಷ್ಟೊಂದು ಮಹಿಳೆಯರು ಕಿರುಸಾಲಕ್ಕಾಗಿ ಸಂಘಗಳನ್ನೇ ಆಶ್ರಯಿಸಿದ್ದಾರೆ. ಈ ಮಹಿಳೆಯರಿಗೆ ಉದ್ದಿಮೆದಾರ ಸಮಾವೇಶಕ್ಕೆ ಆಹ್ವಾನ ಇರಬೇಕಿತ್ತು ಎಂದು ಜ್ಯೋತಿ ಬಾಫುಲೆ ಸ್ತ್ರಿ ಶಕ್ತಿ ಸಂಘದ ಅಧ್ಯಕ್ಷೆ ಭಾರತಿ ಬೇಸರ ವ್ಯಕ್ತಪಡಿಸಿದರು.

ಮಹಿಳಾ ಉದ್ಯಮಿಗಳಿಗೆ ಕೆಎಸ್‌ಎಫ್‌ಸಿ ಸಮಾವೇಶದ ಬಗ್ಗೆ ಮಾಹಿತಿ ನೀಡದೇ ಹೋಗಿದ್ದರಿಂದ ಸರ್ಕಾರದ ಸಾಲಸೌಲಭ್ಯ ಮಾಹಿತಿ ಲಭ್ಯವಾಗದೇ ಮಹಿಳೆಯರು ವಂಚಿತರಾಗಿದ್ದಾರೆ ಎಂಬುದಾಗಿ ಸಮಾವೇಶದಲ್ಲಿ ನೆರೆದಿದ್ದ ಪುರುಷ ಉದ್ಯಮಿಗಳೇ ವಿಷಾದ ವ್ಯಕ್ತಪಡಿಸುತ್ತಿದ್ದದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.