
ಮಂಗಳೂರು: ಕರ್ಣಾಟಕ ಬ್ಯಾಂಕ್ ಗ್ರಾಹಕರ ಮನೆಬಾಗಿಲಿಗೆ ಹೋಗಿ ಚಿನ್ನದ ಸಾಲ ನೀಡುವ ‘ಕೆಬಿಎಲ್- ಸ್ವರ್ಣ ಬಂಧು’ ಯೋಜನೆ ಜಾರಿಗೊಳಿಸಿದೆ.
ಮಣಿಪಾಲ ಗ್ರೂಪ್ ಬೆಂಬಲಿತ ‘ಸಹಿಬಂಧು’ ಎನ್ನುವ ಚಿನ್ನದ ಸಾಲ ವ್ಯವಹಾರ ಸಂಬಂಧಿತ ಸಂಸ್ಥೆಯ ಸಹಭಾಗಿತ್ವದಲ್ಲಿ ರೂಪಿಸಿರುವ ಈ ಯೋಜನೆಯನ್ನು ‘ಆಕರ್ಷಕ ಬಡ್ಡಿದರ ಹಾಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಜಾರಿಗೊಳಿಸಲಾಗಿದೆ.
‘ಪ್ರಸಕ್ತ ಈ ಸೌಲಭ್ಯವು ಆಯ್ದ ಶಾಖೆಗಳಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳಿಗೆ ವಿಸ್ತರಿಸಲಾಗುವುದು’ ಎಂದು ಬ್ಯಾಂಕಿನ ಎಂ.ಡಿ ಹಾಗೂ ಸಿಇಒ ಶ್ರಿಕೃಷ್ಣನ್ ಎಚ್. ತಿಳಿಸಿದ್ದಾರೆ.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ‘ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಫಿನ್‍ಟೆಕ್ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಲಾಗಿದೆ. ಕೆಬಿಎಲ್- ಸ್ವರ್ಣ ಬಂಧು ಯೋಜನೆಯೂ ಅಂತಹ ಉಪಕ್ರಮಗಳಲ್ಲಿ ಒಂದು’ ಎಂದಿದ್ದಾರೆ.
ಸಹಿಬಂಧು ಸಂಸ್ಥೆಯ ಸಹಸಂಸ್ಥಾಪಕ ರಾಜೇಶ್ ಶೇಟ್, ‘ಕರ್ಣಾಟಕ ಬ್ಯಾಂಕಿನೊಂದಿಗೆ ಈ ಸಹಭಾಗಿತ್ವವು ಸಂತಸ ತಂದಿದೆ. ಚಿನ್ನದ ಸಾಲ ಸೌಲಭ್ಯವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವಲ್ಲಿ ಇದು ಸಹಕಾರಿಯಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.