ADVERTISEMENT

Labour Code: ಏಪ್ರಿಲ್‌ 1ರಿಂದ ಕಾರ್ಮಿಕ ಸಂಹಿತೆ ಜಾರಿ?

ಪಿಟಿಐ
Published 3 ಡಿಸೆಂಬರ್ 2025, 15:59 IST
Last Updated 3 ಡಿಸೆಂಬರ್ 2025, 15:59 IST
   

ನವದೆಹಲಿ: ದೇಶದಲ್ಲಿ ಇನ್ನೊಂದು ಸುತ್ತಿನ ಸುಧಾರಣೆಗಳನ್ನು ತರುವ ಉದ್ದೇಶದ ನಾಲ್ಕು ಕಾರ್ಮಿಕ ಸಂಹಿತೆಗಳು 2026ರ ಏಪ್ರಿಲ್‌ 1ರಿಂದ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ.

ಸಂಹಿತೆಗಳಿಗೆ ಅಗತ್ಯವಿರುವ ನಿಯಮಗಳನ್ನು ಜಾರಿಗೆ ತರಲು ಬೇಕಿರುವ ಪ್ರಕ್ರಿಯೆಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಆರಂಭಿಸಿದೆ. ಸಂಹಿತೆಗಳನ್ನು ನವೆಂಬರ್‌ 21ರಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಸಂಹಿತೆಗಳನ್ನು ಜಾರಿಗೆ ತರುವುದಕ್ಕೆ ಸರ್ಕಾರವು ಅವುಗಳ ಅಡಿಯಲ್ಲಿ ನಿಯಮಗಳನ್ನು ರೂಪಿಸಿ, ಅವುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕಿದೆ. ಆದರೆ, ಅದಕ್ಕೂ ಮೊದಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರಡು ನಿಯಮಗಳನ್ನು ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪ–ಸಲಹೆಗಳನ್ನು ಆಹ್ವಾನಿಸಬೇಕಿದೆ.

ADVERTISEMENT

‘ಸಿಐಐ ಇಂಡಿಯಾಎಜ್‌ 2025’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ, ಕರಡು ನಿಯಮಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಬುಧವಾರ ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರಡು ನಿಯಮಗಳನ್ನು ಈ ಹಿಂದೆ ಪ್ರಕಟಿಸಿದ್ದವು. ಆದರೆ ಅದು ಪ್ರಕಟವಾಗಿ ಬಹಳ ಕಾಲ ಸಂದಿದೆ. ಈಗ ಇಂದಿನ ಸಂದರ್ಭಕ್ಕೆ ಅನುಗುಣವಾಗಿ ಕರಡು ನಿಯಮಗಳನ್ನು ಪ್ರಕಟಿಸುವ ಅಗತ್ಯ ಇದೆ ಎಂದು ಮಾಂಡವೀಯ ಹೇಳಿದ್ದಾರೆ.

ಕರಡು ನಿಯಮಗಳನ್ನು ಪ್ರಕಟಿಸಿದ ನಂತರ ಸರ್ಕಾರವು ಸಾರ್ವಜನಿಕರಿಗೆ ಆಕ್ಷೇಪ, ಪ್ರತಿಕ್ರಿಯೆಗಳನ್ನು ಸಲ್ಲಿಸಲು 45 ದಿನಗಳ ಸಮಯಾವಕಾಶ ಕಲ್ಪಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ನಾಲ್ಕು ಸಂಹಿತೆಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ನಿಯಮಗಳನ್ನು ಏಪ್ರಿಲ್‌ 1ರಿಂದ ಜಾರಿಗೆ ತರುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಹೊಸ ಸಂಹಿತೆಗಳ ಅಡಿಯಲ್ಲಿ ಕೂಡ ಕಾರ್ಮಿಕರು ದಿನವೊಂದಕ್ಕೆ ಕೆಲಸ ಮಾಡಬೇಕಿರುವ ಅವಧಿಯು 8 ಗಂಟೆಯಷ್ಟೇ ಆಗಿರುತ್ತದೆ ಎಂದು ಉತ್ತರಿಸಿದ್ದಾರೆ.

ಕಾರ್ಮಿಕರಿಗೆ ಸಂಬಂಧಿಸಿದ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿ ಇರುವ ಕಾರಣದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕಾಗಿದೆ. ಆಗ ಮಾತ್ರ ಕಾರ್ಮಿಕ ಸಂಹಿತೆಗಳು ಜಾರಿಗೆ ಬರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.