ADVERTISEMENT

ಲಾಕ್‌ಡೌನ್‌ ಪರಿಣಾಮ: ಮದ್ಯ, ಸಿಗರೇಟ್‌ ಮಾರಾಟ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 6:27 IST
Last Updated 12 ಜುಲೈ 2020, 6:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ, ಸಿಗರೇಟ್‌,ಐಸ್‌ಕ್ರೀಂ, ಸೌಂದರ್ಯವರ್ಧಕ ಮತ್ತು ಶೃಂಗಾರ ಸಾಧನಗಳ ಮಾರಾಟ ದಿಢೀರ್‌ ಕುಸಿದಿದೆ.

ಇದರಿಂದಾಗಿ ಏಪ್ರಿಲ್‌‌–ಜೂನ್ ತ್ರೈಮಾಸಿಕ ಅವಧಿಯಲ್ಲಿ ‘ಅತಿವೇಗವಾಗಿ ಮಾರಾಟವಾಗುವ ಗ್ರಾಹಕ ಸಾಮಗ್ರಿ (ಎಫ್‌ಎಂಜಿಸಿ)’ ವಲಯದ ಉದ್ಯಮಗಳ ಆದಾಯವೂ ಗಣನೀಯವಾಗಿ ಕುಸಿದಿದೆ.ಲಾಕ್‌ಡೌನ್ ಜಾರಿಗೊಳಿಸಿದ ಮಾರ್ಚ್ ಮತ್ತು ಏಪ್ರಿಲ್‌ ಈ ಎರಡು ತಿಂಗಳಲ್ಲಿ ಎಫ್‌ಎಂಜಿಸಿ ವಲಯ ಭಾರಿ ನಷ್ಟ ಅನುಭವಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ ಎಡೆಲ್ವೆಸ್ ಸೆಕ್ಯೂರಿಟೀಸ್‌ ವರದಿ ಹೇಳಿದೆ.

ಕೊರೊನಾ ಲಾಕ್‌ಡೌನ್‌ನಿಂದ ಪ್ಯಾಕೆಟ್ ಆಹಾರ ಉತ್ಪನ್ನ ಮತ್ತು ಆರೋಗ್ಯ ಹಾಗೂ ನೈರ್ಮಲ್ಯ ಉತ್ಪನ್ನಗಳಿಗೆ ಭಾರಿ ಬೇಡಿಕೆ ಕುದುರಿದ್ದು, ಅದು ಜೂನ್ ನಂತರವೂ ಮುಂದುವರೆಯುವ ಸಾಧ್ಯತೆಗಳಿವೆ ಎಂದು ವರದಿ ಹೇಳಿದೆ.ಬಿಸ್ಕಿಟ್‌, ನೂಡಲ್‌, ಹೆಲ್ತ್‌ & ನ್ಯೂಟ್ರಿಷನ್, ಅಗತ್ಯ ಆಹಾರ ಸಾಮಗ್ರಿ, ಪ್ಯಾಕೆಟ್ ಫುಡ್‌, ಗೃಹ ಕೀಟನಾಶಕ, ಬ್ಯಾಕ್ಟೀರಿಯಾ ನಿರೋಧಕ ಸೋಪ್‌, ಸ್ಯಾನಿಟೈಸರ್‌ನಂತಹ ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನಗಗಳು ಈ‌ ತ್ರೈಮಾಸಿಕದಲ್ಲಿ ಉತ್ತಮ ಚೇತರಿಕೆ ಕಂಡಿವೆ.

ADVERTISEMENT

ಮುನ್ನೋಟ ಪರಿಷ್ಕರಣೆ

ಮದ್ಯ, ಸಿಗರೇಟ್‌ ಮತ್ತು ಸೌಂದರ್ಯವರ್ಧಕಗಳ ಮಾರಾಟ ತೀವ್ರ ಕುಸಿತ ಕಂಡ ಕಾರಣ 2020ರಲ್ಲಿ ದೇಶದ ಎಫ್ಎಂಜಿಸಿ ವಲಯದ ಪ್ರಗತಿ ಶೇ 5–ಶೇ 6ರಷ್ಟಕ್ಕೆ ಕಡಿತಗೊಳಿಸಿದೆ.ಜನವರಿಯಿಂದ ಡಿಸೆಂಬರ್‌ ಅವಧಿಯಲ್ಲಿ ಎಫ್‌ಎಂಜಿಸಿ ವಲಯದ ಪ್ರಗತಿ ಶೇ9–ಶೆ10ರಷ್ಟು ಇರಲಿದೆ ಎಂದು ಮುನ್ನೋಟ ವರದಿಯಲ್ಲಿ ನೆಲ್ಸನ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಅಂದಾಜಿಸಿತ್ತು.

ಲಾಕ್‌ಡೌನ್‌ ಅವಧಿಯಲ್ಲಿ ಜನರು ಮನೆಯಲ್ಲಿಯೇ ಅಡುಗೆ ಮಾಡಲು ಶುರು ಮಾಡಿದ ಕಾರಣ ಅಡುಗೆ ಎಣ್ಣೆ, ಓಟ್ಸ್, ನೂಡಲ್ಸ್‌, ಪಾಸ್ತಾ, ರೆಡಿ ಟು ಈಟ್‌ ಉತ್ಪನ್ನಗಳ‌ ಬೇಡಿಕೆ ನಿರೀಕ್ಷೆ ಮೀರಿ ಹೆಚ್ಚಿದೆ. ಮೂರ್ನಾಲ್ಕು ತಿಂಗಳಿಂದ ಮನೆಯಲ್ಲೇ ಕಾಲ ಕಳೆಯುತ್ತಿರುವ ಜನರು ಸೌಂದರ್ಯದ ಬಗ್ಗೆ ಗಮನ ಹರಿಸದ ಕಾರಣ ಸಹಜವಾಗಿ ಸೌಂದರ್ಯ ಸಾಧನಗಳ ಬಳಕೆ ಕುಸಿದಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.