ADVERTISEMENT

ಲಾಟರಿಗೆ ಏಕರೂಪದ ಜಿಎಸ್‌ಟಿ ಮಾರ್ಚ್‌ 1ರಿಂದ: ಅಧಿಸೂಚನೆ

ಪಿಟಿಐ
Published 23 ಫೆಬ್ರುವರಿ 2020, 20:16 IST
Last Updated 23 ಫೆಬ್ರುವರಿ 2020, 20:16 IST

ನವದೆಹಲಿ :ಲಾಟರಿಗೆಏಕರೂಪದಶೇ 28ರಷ್ಟು ಜಿಎಸ್‌ಟಿಯುಮಾರ್ಚ್‌ 1 ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ರೆವಿನ್ಯೂ ಇಲಾಖೆಯು ಭಾನುವಾರ ಅಧಿಸೂಚನೆ ಹೊರಡಿಸಿದೆ.

ಡಿಸೆಂಬರ್‌ನಲ್ಲಿ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಲಾಟರಿ ಪೂರೈಕೆಗೆ ಕೇಂದ್ರ ತೆರಿಗೆ ದರ ಶೇ 14ರಷ್ಟಿರಲಿದ್ದು, ರಾಜ್ಯಗಳು ಸಹ ಶೇ 14ರಷ್ಟು ತೆರಿಗೆ ವಿಧಿಸಲಿವೆ. ಒಟ್ಟಾರೆಯಾಗಿ ದೇಶದಾದ್ಯಂತ ಲಾಟರಿಗೆ ಶೇ 28ರಷ್ಟು ತೆರಿಗೆ ಇರಲಿದೆ.

ಸದ್ಯಕ್ಕೆ, ರಾಜ್ಯ ಸರ್ಕಾರಗಳು ನಿರ್ವಹಿಸುವ ಲಾಟರಿಗಳಿಗೆ ಶೇ 12ರಷ್ಟು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ನಡೆಸುವ ಲಾಟರಿಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ.

ADVERTISEMENT

‘ಕೆಲವು ರಾಜ್ಯಗಳಲ್ಲಿ ಲಾಟರಿ ರೂಪದಲ್ಲಿ ಜೂಜು ನಡೆಯುತ್ತಿದೆ.ಇದೀಗ ಜಿಎಸ್‌ಟಿ ದರದಲ್ಲಿ ಬದಲಾವಣೆ ಆಗುತ್ತಿರುವುದರಿಂದ ಪರಿಣಾಮಕಾರಿಯಾಗಿ ಹೊಸ ತೆರಿಗೆ ದರ ಜಾರಿಗೊಳಿಸುವ ಮೂಲಕ ಅದನ್ನು ನಿಯಂತ್ರಿಸಲು ಅನುಕೂಲ ಆಗಲಿದೆ’ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್‌ ಮೋಹನ್‌ ಹೇಳಿದ್ದಾರೆ.

ಹೆಚ್ಚಲಿದೆ ಏ.ಸಿ ದರ

ಕಸ್ಟಮ್ಸ್‌ ಸುಂಕದಲ್ಲಿ ಏರಿಕೆ ಮತ್ತು ಕೋವಿಡ್‌–19 ವೈರಸ್‌ನಿಂದಾಗಿ ಏ.ಸಿಗಳ ದರದಲ್ಲಿ ಶೇ 3 ರಿಂದ ಶೇ 5ರವರೆಗೂ ಏರಿಕೆಯಾಗಲಿದೆ.

ಚೀನಾವು ಭಾರತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಏ.ಸಿ ಬಿಡಿಭಾಗಗಳನ್ನು ಪೂರೈಸುತ್ತಿದೆ. ವೈರಸ್‌ ಸೋಂಕಿನಿಂದಾಗಿ ಪೂರೈಕೆಯಲ್ಲಿ ಕೊರತೆ ಎದುರಾಗಿದೆ. ಇದರ ಜತೆಗೆಕೆಲವು ಬಿಡಿಭಾಗಗಳನ್ನು ವಿಮಾನದ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಇದು ಸಾಗಣೆ ವೆಚ್ಚವನ್ನು ಹೆಚ್ಚಿಸುತ್ತಿದೆ ಎಂದು ತಯಾರಕರು ಹೇಳಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಫ್ರಿಜ್‌ ಮತ್ತು ಏ.ಸಿಗಳ ಕಂಪ್ರೆಸರ್‌ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ 10 ರಿಂದ ಶೇ 12.5ಕ್ಕೆ ಹೆಚ್ಚಿಸಲಾಗಿದೆ. ಒಂದು ಏ.ಸಿ ಬೆಲೆ ₹ 700ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದುವೋಲ್ಟಾಸ್‌ ಕಂಪನಿ ಹೇಳಿದೆ

ಏಪ್ರಿಲ್‌ನಿಂದ ನೈಸರ್ಗಿಕ ಅನಿಲ ಅಗ್ಗ

ನೈಸರ್ಗಿಕ ಅನಿಲದ ಬೆಲೆಯು ಏಪ್ರಿಲ್‌ನಿಂದ ಶೇ 25ರಷ್ಟು ಅಗ್ಗವಾಗುವ ಸಾಧ್ಯತೆ ಇದೆ.ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ತಗ್ಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಅಗ್ಗವಾಗಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಮತ್ತು ಆಯಿಲ್‌ ಇಂಡಿಯಾ, ದೇಶದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದಲ್ಲಿ ಗರಿಷ್ಠ ಪಾಲು ಹೊಂದಿವೆ.

ರಸಗೊಬ್ಬರ ತಯಾರಿಕೆ, ವಿದ್ಯುತ್‌ ಉತ್ಪಾದನೆ, ವಾಹನಗಳಲ್ಲಿ ಬಳಸುವ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಮತ್ತು ಕೊಳವೆಮಾರ್ಗದ ಮೂಲಕ ಮನೆಗಳಿಗೆ ಪೂರೈಸುವ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಇನ್ನು ಮುಂದೆ ಪ್ರತಿ ವರ್ಷ ಏಪ್ರಿಲ್‌ ಮತ್ತು ಅಕ್ಟೋಬರ್‌ನಲ್ಲಿ ಪರಿಷ್ಕರಣೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.