ADVERTISEMENT

ಮೈಂಡ್‌ಟ್ರೀ ಷೇರು ಖರೀದಿಗೆಎಲ್‌ಆ್ಯಂಡ್‌ಟಿ ಮುಕ್ತ ಕೊಡುಗೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 18:07 IST
Last Updated 7 ಜೂನ್ 2019, 18:07 IST
   

ನವದೆಹಲಿ: ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಕಂಪನಿ ಮೈಂಡ್‌ಟ್ರೀನಲ್ಲಿನ ಶೇ 31ರಷ್ಟು ಪಾಲು ಬಂಡವಾಳ ಖರೀದಿಸಲು ಮೂಲಸೌಕರ್ಯ ವಲಯದ ದೈತ್ಯ ಸಂಸ್ಥೆ ಲಾರ್ಸನ್‌ ಆ್ಯಂಡ್‌ ಟುಬ್ರೊ (ಎಲ್‌ಆ್ಯಂಡ್‌ಟಿ) ಮುಕ್ತ ಕೊಡುಗೆ ಪ್ರಕಟಿಸಿದೆ.

ತಲಾ ₹ 10 ಮುಖ ಬೆಲೆಯ ಪ್ರತಿ ಷೇರಿಗೆ ₹ 980 ರಂತೆ ₹ 5,029.8 ಕೋಟಿ ವೆಚ್ಚದಲ್ಲಿ ಮೈಂಡ್‌ಟ್ರೀ ಷೇರುದಾರರ 5.13 ಕೋಟಿ ಷೇರುಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಲಾಗಿದೆ. ಪ್ರತಿ ಷೇರಿನ ಮುಕ್ತ ಕೊಡುಗೆ ಬೆಲೆಯು ಶುಕ್ರವಾರ ಷೇರುಪೇಟೆ ವಹಿವಾಟು ಅಂತ್ಯದಲ್ಲಿನ ಸಂಸ್ಥೆಯ ಷೇರು ಬೆಲೆಗಿಂತ (₹ 970.45) ಹೆಚ್ಚಿಗೆ ಇರಲಿದೆ.

ಈ ಕೊಡುಗೆಯು ಇದೇ 17ರಿಂದ ಆರಂಭಗೊಂಡು ಇದೇ 28ಕ್ಕೆ ಕೊನೆಗೊಳ್ಳಲಿದೆ.

ADVERTISEMENT

ಎಲ್‌ಆ್ಯಂಡ್‌ಟಿ, ಮೈಂಡ್‌ಟ್ರೀನಲ್ಲಿನ ಪಾಲು ಬಂಡವಾಳವನ್ನು ಒತ್ತಾಯಪೂರ್ವಕವಾಗಿ ಖರೀದಿಲು ಮಾರ್ಚ್‌ ತಿಂಗಳಲ್ಲಿ ಚಾಲನೆ ನೀಡಿತ್ತು. ಕೆಫೆ ಕಾಫಿ ಡೇ ಮಾಲೀಕ ವಿ. ಜಿ. ಸಿದ್ದಾರ್ಥ ಅವರ ಶೇ 20.32ರಷ್ಟು ಷೇರುಗಳನ್ನು ಖರೀದಿಸಿತ್ತು. ಮುಕ್ತ ಮಾರುಕಟ್ಟೆಯಿಂದ ಶೇ 15ರಷ್ಟು ಷೇರುಗಳನ್ನು ಖರೀದಿಸಲು ದಲ್ಲಾಳಿಗಳಿಗೆ ಸೂಚಿಸಿತ್ತು.

ಮೈಂಡ್‌ಟ್ರೀನಲ್ಲಿನ ಶೇ 66ರಷ್ಟು ಪಾಲು ಬಂಡವಾಳವನ್ನು ₹ 10,800 ಕೋಟಿಗೆ ಖರೀದಿಸುವುದು ‘ಎಲ್‌ಆ್ಯಂಡ್‌ಟಿ’ನ ಉದ್ದೇಶವಾಗಿದೆ. ಸದ್ಯಕ್ಕೆ ‘ಎಲ್‌ಆ್ಯಂಡ್‌ಟಿ’ನ ಪಾಲು ಬಂಡವಾಳ ಪ್ರಮಾಣ ಶೇ 28.90ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.