ADVERTISEMENT

ಪೇಟೆ ಮೇಲೆ ಹೂಡಿಕೆ ಪ್ರಭಾವ

ವಹಿವಾಟಿನ ದಿಕ್ಕು ನಿರ್ಧರಿಸಲಿರುವ ಕಚ್ಚಾ ತೈಲ, ಕರೆನ್ಸಿ ಏರಿಳಿತ

ಪಿಟಿಐ
Published 4 ಮಾರ್ಚ್ 2019, 17:53 IST
Last Updated 4 ಮಾರ್ಚ್ 2019, 17:53 IST
   

ನವದೆಹಲಿ: ಕಚ್ಚಾ ತೈಲ ದರ, ವಿದೇಶಿ ಹೂಡಿಕೆ ಮತ್ತು ರೂಪಾಯಿ ಮೌಲ್ಯದಲ್ಲಿನ ಏರಿಳಿತವು ಷೇರುಪೇಟೆಯ ಈ ವಾರದ ವಹಿವಾಟಿನ ದಿಕ್ಕು ನಿರ್ಧರಿಸಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಹಾ ಶಿವರಾತ್ರಿ ಪ್ರಯುಕ್ತ ಸೋಮವಾರ ವಹಿವಾಟಿಗೆ ರಜೆ ಇತ್ತು. ಹೀಗಾಗಿ ಈ ವಾರ ನಾಲ್ಕು ದಿನಗಳ ವಹಿವಾಟು ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮೂಡಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಕಳೆದ ವಾರ ಷೇರುಪೇಟೆಯಲ್ಲಿ ಸಾಕಷ್ಟು ಏರಿಳಿತ ಕಂಡು ಬಂದಿತ್ತು. ಇದೀಗ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಹೂಡಿಕೆ ಚಟುವಟಿಕೆಯಲ್ಲಿ ಇನ್ನಷ್ಟು ಸುಧಾರಣೆ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.

ADVERTISEMENT

‘ಭಾರತ–ಪಾಕಿಸ್ತಾನದ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನ ಸ್ಥಿತಿ ತಗ್ಗುತ್ತಿದೆ. ಹೀಗಾಗಿ, ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯುವ ಸಾಧ್ಯತೆ ಇದೆ. ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಒಪ್ಪಂದ ನಡೆಯುವ ಸಾಧ್ಯತೆ ಇದೆ. ಈ ವಿದ್ಯಮಾನವು ಸಹ ಷೇರುಪೇಟೆಯಲ್ಲಿ ಉತ್ತಮ ಚಟುವಟಿಕೆ ನಡೆಯುವಂತೆ ಮಾಡಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಕಚ್ಚಾ ತೈಲ ದರ, ವಿದೇಶಿ ಬಂಡವಾಳ ಹೂಡಿಕೆ ಮತ್ತು ಕರೆನ್ಸಿ ಚಲನೆ
ಯನ್ನು ಆಧರಿಸಿ ಹೂಡಿಕೆದಾರರು ವಹಿವಾಟಿಗೆ ಮುಂದಾಗಲಿದ್ದಾರೆ’ ಎಂದೂ ಹೇಳಿದ್ದಾರೆ.

ಸೇವಾ ವಲಯದ ಪ್ರಗತಿಯ ಅಂಕಿ–ಅಂಶಗಳು ಮಂಗಳವಾರ ಹೊರಬೀಳ
ಲಿವೆ. ಇದು ಸಹ ಸೂಚ್ಯಂಕದ ಚಲನೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಕ್ಟೋಬರ್‌ – ಡಿಸೆಂಬರ್ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಶೇ 6.6ರಷ್ಟು ಬೆಳವಣಿಗೆ ಕಂಡಿದ್ದು, 15 ತಿಂಗಳಲ್ಲಿನ ಕಡಿಮೆ ವೃದ್ಧಿ ದರ ಇದಾಗಿದೆ. ಈ ಸಂಗತಿಯು ಕೂಡ ವಾರದ ವಹಿವಾಟಿನ ಮೇಲೆ ಪ್ರಭಾವ ಬೀರಲಿದೆ ಎಂದು ಪರಿಣತರು ಹೇಳಿದ್ದಾರೆ.

ವಿದೇಶಿ ಹೂಡಿಕೆ 15 ತಿಂಗಳ ಗರಿಷ್ಠ

ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಫೆಬ್ರುವರಿಯಲ್ಲಿ ₹ 17,220 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದು 15 ತಿಂಗಳಿನಲ್ಲಿಯೇ ಗರಿಷ್ಠ ಹೂಡಿಕೆಯಾಗಿದೆ.ಈ ಹಿಂದೆ 2017ರ ನವೆಂಬರ್‌ನಲ್ಲಿ ₹ 19,728 ಕೋಟಿ ಹೂಡಿಕೆ ಮಾಡಿದ್ದರು.

ಸಕಾರಾತ್ಮಕ ಅಂಶಗಳು ಮತ್ತು ಸರ್ಕಾರದ ವೆಚ್ಚದ ಯೋಜನೆಯಲ್ಲಿನ ಸ್ಪಷ್ಟತೆಯಿಂದಾಗಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಾಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಜನವರಿಯಲ್ಲಿ ₹ 5,264 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

‘ಕೇಂದ್ರೀಯ ಬ್ಯಾಂಕ್‌ನ ಬಡ್ಡಿದರ ಕಡಿತದ ನಿರ್ಧಾರ ಮತ್ತು ಮಧ್ಯಂತರ ಬಜೆಟ್‌ನ ಸಕಾರಾತ್ಮಕ ಅಂಶಗಳು ಹೂಡಿಕೆ ಚಟುವಟಿಕೆಯನ್ನು ಹೆಚ್ಚಿಸಿವೆ’ ಎಂದು ಫಂಡ್ಸ್‌ ಇಂಡಿಯಾ ಸಂಸ್ಥೆಯ ಮ್ಯೂಚುವಲ್ ಫಂಡ್‌ ಸಂಶೋಧನಾ ಮುಖ್ಯಸ್ಥೆ ವಿದ್ಯಾ ಬಾಲಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.