ADVERTISEMENT

ಕಚ್ಚಾ ತೈಲದ ಬಿಕ್ಕಟ್ಟಿಗೆ ಷೇರುಪೇಟೆಯಲ್ಲಿ ತಲ್ಲಣ

ಪಿಟಿಐ
Published 17 ಸೆಪ್ಟೆಂಬರ್ 2019, 20:03 IST
Last Updated 17 ಸೆಪ್ಟೆಂಬರ್ 2019, 20:03 IST
ಕರಡಿ
ಕರಡಿ   

ಮುಂಬೈ: ಕಚ್ಚಾ ತೈಲ ಬೆಲೆ ಹೆಚ್ಚಳವು ಭಾರತದ ವಿತ್ತೀಯ ಕಳವಳ ಹೆಚ್ಚಿಸಿ ಆರ್ಥಿಕತೆಗೆ ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡಲಿರುವ ಭೀತಿಯಿಂದಾಗಿ ದೇಶಿ ಷೇರುಪೇಟೆಯಲ್ಲಿ ಸತತ ಎರಡನೆ ದಿನವೂ ಸೂಚ್ಯಂಕಗಳು ಕುಸಿತ ದಾಖಲಿಸಿದವು.

ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಘಟಕಗಳ ಮೇಲಿನ ಡ್ರೋನ್‌ ದಾಳಿಯು, ವಿಶ್ವದಾದ್ಯಂತ ತಲ್ಲಣ ಮೂಡಿಸಿರುವುದು ಮುಂಬೈ ಷೇರುಪೇಟೆಯಲ್ಲಿಯೂ ಪ್ರತಿಫಲನಗೊಂಡಿತು. ಅತಿಯಾದ ಮಾರಾಟ ಒತ್ತಡದಿಂದಾಗಿ ಸಂವೇದಿ ಸೂಚ್ಯಂಕವು 642 ಅಂಶಗಳಷ್ಟು ಕುಸಿತ ಕಂಡಿತು. ಹಿಂದಿನ ವಾರದ ಸಂಪೂರ್ಣ ಗಳಿಕೆಯು ತೈಲ ಬಿಕ್ಕಟ್ಟಿನಲ್ಲಿ ಕೊಚ್ಚಿಕೊಂಡು ಹೋಯಿತು. ಡಾಲರ್‌ ಎದುರು ರೂಪಾಯಿ ವಿನಿಮಯ ದರವು 18 ಪೈಸೆ ಕುಸಿತ ಕಂಡು ₹ 71.78ಕ್ಕೆ ಇಳಿಯಿತು.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯು ದೇಶಿ ಅರ್ಥ ವ್ಯವಸ್ಥೆಯನ್ನೂ ತೀವ್ರವಾಗಿ ಬಾಧಿಸಲಿದೆ ಎಂದು ಅನೇಕ ಪರಿಣತರೂ ವಿಶ್ಲೇಷಿಸಿದ್ದಾರೆ.

ADVERTISEMENT

‘ಆರ್ಥಿಕತೆಯು ಸದ್ಯದಲ್ಲೇ ಚೇತರಿಸಿಕೊಳ್ಳುವ ಸಾಧ್ಯತೆ ಕ್ಷೀಣಿಸಿದೆ. ಸರ್ಕಾರದ ಉತ್ತೇಜನಾ ಕೊಡುಗೆಗಳು ಪೇಟೆಯ ವಹಿವಾಟುದಾರರಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲಗೊಂಡಿವೆ. ಹೂಡಿಕೆದಾರರಲ್ಲಿ ನಿರಾಶೆ ಮೂಡಿದೆ. ಹೀಗಾಗಿ ಷೇರುಗಳಲ್ಲಿ ಮಾರಾಟ ಒತ್ತಡ ಹೆಚ್ಚಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ತಮ್ಮ ಮಾರಾಟ ಮುಂದುವರೆಸಿದ್ದಾರೆ. ಮಂಗಳವಾರದ ವಹಿವಾಟಿನಲ್ಲಿ ₹ 808 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ

ಕೇಂದ್ರ ಸರ್ಕಾರದ ಬಜೆಟ್‌ ಮಂಡನೆ ನಂತರ (ಜು. 5) ಇದೇ ಮೊದಲ ಬಾರಿಗೆ ಮಂಗಳವಾರ ಇಂಧನಗಳ ಬೆಲೆ ಗರಿಷ್ಠ ಏರಿಕೆ ದಾಖಲಿಸಿತು. ಬಜೆಟ್‌ನಲ್ಲಿ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರ್‌ಗೆ ₹ 2.50ರಂತೆ ಹೆಚ್ಚಿಸಲಾಗಿತ್ತು.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ 14 ಪೈಸೆ ಮತ್ತು 15 ಪೈಸೆ ಹೆಚ್ಚಳ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ₹ 74.63 ಮತ್ತು ಡೀಸೆಲ್‌ ಬೆಲೆ 67.81

ಕರಗಿದ ₹ 2.72 ಲಕ್ಷ ಕೋಟಿ ಸಂಪತ್ತು

ಎರಡು ದಿನಗಳ ವಹಿವಾಟಿನಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ₹ 2.72 ಲಕ್ಷ ಕೋಟಿ ಸಂಪತ್ತು ಕರಗಿದೆ. ಷೇರುಗಳಲ್ಲಿನ ಭಾರಿ ಮಾರಾಟ ಒತ್ತಡದಿಂದಾಗಿ ಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಈಗ ₹ 139 ಲಕ್ಷ ಕೋಟಿಗೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.