ADVERTISEMENT

ಲಾಭ ಗಳಿಕೆಗೆ ಕುಸಿದ ಷೇರುಪೇಟೆ

ಪಿಟಿಐ
Published 19 ನವೆಂಬರ್ 2020, 15:34 IST
Last Updated 19 ನವೆಂಬರ್ 2020, 15:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹಣಕಾಸು ವಲಯದ ಷೇರುಗಳು ಗುರುವಾರ ಲಾಭ ಗಳಿಕೆ ವಹಿವಾಟಿಗೆ ಒಳಗಾದವು. ಇದರಿಂದಾಗಿ ದೇಶದ ಷೇರುಪೇಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಇಳಿಕೆ ಕಂಡಿವೆ.

ಹಲವು ದೇಶಗಳಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಉಂಟುಮಾಡಿದೆ. ಇದು ಸಹ ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿದೆ.

ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮಟ್ಟವಾದ 44,230 ಅಂಶಗಳಿಗೆ ತಲುಪಿದ್ದ ಮುಂಬೈ ಷೇರುಪೇಟೆ ಸೂಚ್ಯಂಕವು ಬಳಿಕ 580 ಅಂಶ ಕುಸಿತ ಕಂಡು 43,600 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ ಮಧ್ಯಂತರ ವಹಿವಾಟಿನಲ್ಲಿ 12,963 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಆ ಬಳಿಕ 166 ಅಂಶ ಇಳಿಕೆಯಾಗಿ 12,772 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಎರಡೂ ಸೂಚ್ಯಂಕಗಳು ಹಿಂದಿನ ಮೂರು ವಹಿವಾಟುಗಳಲ್ಲಿಯೂ ಹೊಸ ಎತ್ತರ ತಲುಪಿದ್ದವು. ಈ ತಿಂಗಳಿನಲ್ಲಿ ಎರಡು ಬಾರಿ ಮಾತ್ರವೇ ನಕಾರಾತ್ಮಕವಾಗಿ ವಹಿವಾಟು ಅಂತ್ಯಗೊಂಡಿದೆ.

ನಷ್ಟ: ದಿನದ ವಹಿವಾಟಿನಲ್ಲಿ ಎಸ್‌ಬಿಐ ಷೇರು ಶೇ 4.88ರಷ್ಟು ಗರಿಷ್ಠ ನಷ್ಟ ಕಂಡಿತು. ಎಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಭಾರ್ತಿ ಏರ್‌ಟೆಲ್‌ ಷೇರುಗಳ ಬೆಲೆಯೂ ಇಳಿಕೆ ಆಗಿದೆ.

ಗಳಿಕೆ: ಪವರ್‌ ಗ್ರಿಡ್‌, ಐಟಿಸಿ, ಎನ್‌ಟಿಪಿಸಿ, ಟಾಟಾ ಸ್ಟೀಲ್‌ ಮತ್ತು ಟೈಟಾನ್‌ ಷೇರುಗಳ ಮೌಲ್ಯ ಶೇ 2.43ರವರೆಗೂ ಏರಿಕೆ ಆಗಿದೆ.

ಬ್ಯಾಂಕಿಂಗ್, ಹಣಕಾಸು, ದೂರಸಂಪರ್ಕ, ರಿಯಲ್‌ ಎಸ್ಟೇಟ್‌, ಲೋಹ, ಇಂಧನ ಮತ್ತು ವಾಹನ ವಲಯದ ಸೂಚ್ಯಂಕಗಳು ಶೇ 2.75ರವರೆಗೆ ಇಳಿಕೆಯಾದವು. ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 0.65ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.