ADVERTISEMENT

ಆರೋಗ್ಯ ವಿಮೆ: ಕಣ್ಣು ಮುಚ್ಚಿ ಖರೀದಿಸಬೇಡಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 19:30 IST
Last Updated 21 ಜನವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆ ರೋಗ್ಯ ಸೇವೆಗಳ ವೆಚ್ಚವು ವಿಪರೀತವಾಗುತ್ತಿರುವುದರಿಂದ ‘ಆರೋಗ್ಯ ವಿಮೆ’ ಎಂಬುದು ಈಗ ಅನಿವಾರ್ಯ ಎಂಬಂತಾಗಿದೆ. ಭಾರತದಲ್ಲಿ ವೈದ್ಯಕೀಯ ಹಣದುಬ್ಬರವು ಜಾಗತಿಕ ಸರಾಸರಿಗಿಂತ ತುಂಬಾ ಹೆಚ್ಚಾಗಿದೆ. ಅಷ್ಟೇ ಅಲ್ಲ, ಅಭಿವೃದ್ಧಿಹೊಂದಿದ ರಾಷ್ಟ್ರಗಳಿಗಿಂತಲೂ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿ ಆರೋಗ್ಯ ವಿಮೆಯೊಂದೇ ಪ್ರತಿಯೊಬ್ಬರ ಮುಂದಿರುವ ಆಶಾಕಿರಣವಾಗಿದೆ.

ಆದರೆ, ಆರೋಗ್ಯ ವಿಮೆ ಮಾಡಿಸುವ ಮುನ್ನ ವಿಮಾ ಸಂಸ್ಥೆಯು ನೀಡುವ ಸೌಲಭ್ಯಗಳೇನು, ಲಾಭಗಳೇನು, ಯಾವ್ಯಾವ ವಿಚಾರಗಳನ್ನು ವಿಮೆಯಿಂದ ಹೊರಗಿಡಲಾಗಿದೆ ಮುಂತಾದ ವಿಚಾರಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಅಗತ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನೂ ಆರೋಗ್ಯ ವಿಮೆ ಭರಿಸುವುದಿಲ್ಲ ಎಂಬುದು ಗೊತ್ತಿರುವ ವಿಚಾರ. ಪ್ರತಿಯೊಂದು ವಿಮೆಯೂ ಕೆಲವು ವಿಚಾರಗಳನ್ನು ಒಳಗೊಂಡಿರುತ್ತದೆ ಮತ್ತು ಕೆಲವನ್ನು ವಿಮೆಯ ವ್ಯಾಪ್ತಿಯಿಂದ ಹೊರಗಿಟ್ಟಿರುತ್ತದೆ ಎಂಬುದು ಸಹಜ. ಯಾವ ಸಂಗತಿಗಳನ್ನು ವಿಮೆಯಿಂದ ‘ಹೊರಗಿಡಲಾಗಿದೆ’ ಎಂಬುದನ್ನು ವಿಮೆ ಪಾಲಿಸಿದಾರರು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಅಗತ್ಯ. ಈ ಮಾಹಿತಿ ಇಲ್ಲದೆಯೇ ವಿಮೆ ಮಾಡಿಸಿದರೆ, ವಿಮೆ ಇದ್ದರೂ ಉಪಯೋಗಕ್ಕೆ ಬಾರದಂತಾಗುವ ಅಪಾಯವಿದೆ. ಆದ್ದರಿಂದ ವಿಮೆದಾರರು ತಾವು ಖರೀದಿಸುವ ವಿಮೆಯ ನಿಯಮಾವಳಿಗಳನ್ನು ತಿಳಿಯುವುದು ಅಗತ್ಯ.

ADVERTISEMENT

ಒಂದು ಸಂಪೂರ್ಣ ಆರೋಗ್ಯ ವಿಮೆಯು, ವಿಮೆದಾರರ ಚಿಕಿತ್ಸಾ ವೆಚ್ಚಗಳನ್ನು ಭರಿಸುವುದರ ಜತೆಗೆ ರೋಗಗಳನ್ನು ತಡೆಗಟ್ಟುವ ಅಂಶಗಳನ್ನು ಸಹ ಒಳಗೊಂಡಿರುತ್ತದೆ. ಇಂಥ ವಿಮೆಗಳು ಸಾಮಾನ್ಯವಾಗಿ, ವಿಮಾದಾರರು 24 ಗಂಟೆ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆಗೆ ತಗಲುವ ವೆಚ್ಚ ಭರಿಸುತ್ತವೆ. ಇದರಲ್ಲಿ ಆಸ್ಪತ್ರೆಯ ಕೋಣೆ ಬಾಡಿಗೆ, ತೀವ್ರ ನಿಗಾ ಘಟಕದ ಬಾಡಿಗೆ, ಶಸ್ತ್ರಚಿಕಿತ್ಸಾ ಕೊಠಡಿಯ ವೆಚ್ಚ, ವೈದ್ಯರು ಮತ್ತು ಶಸ್ತ್ರಚಿಕಿತ್ಸಕರ ಶುಲ್ಕ, ಔಷಧಗಳ ವೆಚ್ಚ ಸೇರಿರುತ್ತವೆ.

ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುಂಚಿನ ಮತ್ತು ಆನಂತರ ಬರುವ ವೈದ್ಯಕೀಯ ವೆಚ್ಚಗಳೂ ವಿಮೆ ವ್ಯಾಪ್ತಿ ಒಳಗೆ ಬರುತ್ತವೆ. ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ಗೆ ತಗಲುವ ವೆಚ್ಚ (ನಿಗದಿತ ದೂರದವರೆಗೆ), ಆಸ್ಪತ್ರೆಗೆ ದಾಖಲಾಗದೆಯೂ ಪಡೆಯಬಹುದಾದ ‘ಡೇ ಕೇರ್‌’ ಚಿಕಿತ್ಸಾ ವೆಚ್ಚವೂ ಇಂತಹ ವಿಮೆಯಲ್ಲಿ ಒಳಗೊಂಡಿರುತ್ತದೆ.

ಆರೋಗ್ಯ ವಿಮೆಯು ದಾನಿಗಳಿಂದ ಅಂಗಾಂಗವನ್ನು ಪಡೆದು ಕಸಿ ಮಾಡಲು ತಗಲುವ ವೆಚ್ಚವನ್ನೂ ಭರಿಸುತ್ತದೆ. ಇದಕ್ಕೆ ತಗಲುವ ಶಸ್ತ್ರ ಚಿಕಿತ್ಸೆಯ ವೆಚ್ಚವೂ ವಿಮೆಯ ವ್ಯಾಪ್ತಿಯೊಳಗಿರುತ್ತದೆ. ಅನೇಕ ವಿಮೆಗಳು ಆಯುರ್ವೇದ, ಸಿದ್ಧಿ, ಯುನಾನಿ ಹಾಗೂ ಹೋಮಿಯೋಪಥಿ ಚಿಕಿತ್ಸಾ ವಿಧಾನಗಳನ್ನೂ ಮಾನ್ಯ ಮಾಡಿವೆ. ಆಸ್ಪತ್ರೆಯಲ್ಲಿ ಬೆಡ್‌ಗಳು ಲಭ್ಯವಿಲ್ಲದೆ, ಮನೆಯಲ್ಲೇ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯ ಸಂದರ್ಭ ಬಂದರೆ, ಅಂಥ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸಹ ಕೆಲವು ವಿಮೆಗಳು ಭರಿಸುತ್ತವೆ.

ಆರೋಗ್ಯ ವಿಮೆಯ ಮುಖ್ಯವಾದ ಮತ್ತು ಜನಪ್ರಿಯವಾದ ಲಾಭವೆಂದರೆ, ವಿಮಾ ಮೊತ್ತದ ಮರುಸ್ಥಾಪನೆ. ವಿಮಾದಾರರು ಒಮ್ಮೆ ವಿಮಾ ಮೊತ್ತವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಬಳಸಿಕೊಂಡಿದ್ದರೂ, ಆ ವರ್ಷದೊಳಗೆ ಮತ್ತೊಮ್ಮೆ ಚಿಕಿತ್ಸೆ ಪಡೆಯುವ ಸಂದರ್ಭ ಬಂದರೆ ಅಷ್ಟೇ ಹಣವನ್ನು ಮರು ಸ್ಥಾಪಿಸಲು ಇಂಥ ವಿಮೆಗಳು ಅವಕಾಶ ಕಲ್ಪಿಸುತ್ತವೆ. ಆದರೆ ಒಬ್ಬನೇ ವ್ಯಕ್ತಿ ಒಂದೇ ರೋಗದ ಚಿಕಿತ್ಸೆಗೆ ಈ ಸೌಲಭ್ಯವನ್ನು ಬಳಸುವಂತಿಲ್ಲ. ವರ್ಷದಲ್ಲಿ ಒಂದು ಬಾರಿ ಮಾತ್ರ ಈ ಸೌಲಭ್ಯ ಬಳಕೆಗೆ ಅವಕಾಶ ಇರುತ್ತದೆ.

ಹೆಚ್ಚಿನ ಆರೋಗ್ಯ ವಿಮೆಗಳು ಈ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುತ್ತವೆ. ಕೆಲವು ವಿಮಾ ಕಂಪನಿಗಳು ಹೆರಿಗೆ ವೆಚ್ಚ, ನವಜಾತ ಶಿಶುವಿನ ಚಿಕಿತ್ಸಾ ವೆಚ್ಚ ಹಾಗೂ ಹೊರ ರೋಗಿ ಚಿಕಿತ್ಸಾ (ಒಪಿಡಿ) ವೆಚ್ಚವನ್ನೂ ಭರಿಸುವಂಥ ಪಾಲಿಸಿಗಳನ್ನು ನೀಡುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಆಯಾಮಗಳನ್ನು ಇಂಥ ಆರೋಗ್ಯ ವಿಮೆಗಳು ಒಳಗೊಂಡಿರುತ್ತವೆ. ಆದರೆ ಕೆಲವು ವಿಮೆಗಳಲ್ಲಿ ಕೆಲವು ಅಂಶಗಳನ್ನು ವಿಮಾ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ವಿಮೆ ಮಾಡಿಸುವಾಗಇಂಥ ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ.

ಪಾಲಿಸಿ ಮಾಡಿಸುವುದಕ್ಕೂ ಮೊದಲು ವಿಮಾದಾರರಿಗೆ ಇದ್ದ ರೋಗವನ್ನು ಆರೋಗ್ಯ ವಿಮೆಗಳು ಸಾಮಾನ್ಯವಾಗಿ ವಿಮಾ ವ್ಯಾಪ್ತಿಯೊಳಗೆ ಸೇರಿಸುವುದಿಲ್ಲ. ಇಂಥ ರೋಗದ ಚಿಕಿತ್ಸೆಯನ್ನೂ ವಿಮಾ ವ್ಯಾಪ್ತಿಗೆ ತರಬೇಕಾದರೆ ಕನಿಷ್ಠ 1ರಿಂದ 4 ವರ್ಷಗಳವರೆಗೆ ಕಾಯಬೇಕಾಗುತ್ತದೆ.

ಪಾಲಿಸಿ ಖರೀದಿಸಿ 30 ರಿಂದ 90 ದಿನಗಳೊಳಗೆ ಬರುವ ಕಾಯಿಲೆಗಳ ಚಿಕಿತ್ಸೆಯ ವೆಚ್ಚವನ್ನು ಕೆಲವು ಪಾಲಿಸಿಗಳು ಭರಿಸುವುದಿಲ್ಲ. ಪಾಲಿಸಿ ಮಾಡಿಸಿದ ಮೊದಲ 2ರಿಂದ 4ವರ್ಷಗಳ ಅವಧಿಯಲ್ಲಿ ಮಂಡಿಚಿಪ್ಪು ಮರು ಜೋಡಣೆ, ಮೂಲವ್ಯಾಧಿ, ಹರ್ನಿಯಾದಂಥ ಚಿಕಿತ್ಸೆಗಳಿಗೆ ನೆರವು ನೀಡಲಾಗುವುದಿಲ್ಲ.

ಸ್ವಯಂಕೃತ ಗಾಯಗಳು, ಯುದ್ಧ, ದಂಗೆ, ಪರಮಾಣು ಮಾಲಿನ್ಯ ಮುಂತಾದ ಕಾರಣಗಳಿಂದ ಆದ ಗಾಯ ಅಥವಾ ಹಾನಿಯ ಚಿಕಿತ್ಸೆಗೆ, ಕುಡಿತ ಅಥವಾ ಮಾದಕ ವಸ್ತು ಸೇವನೆಯಿಂದ ಬರುವ ಕಾಯಿಲೆಗಳು ಹಾಗೂ ಎಚ್‌ಐವಿ ಸೋಂಕು /ಏಡ್ಸ್‌ ವಿಮಾ ವ್ಯಾಪ್ತಿಯೊಳಗೆ ಬರುವುದಿಲ್ಲ.

ಸೌಂದರ್ಯ ಸುರೂಪಿ ಚಿಕಿತ್ಸೆ, ದಂತ ಚಿಕಿತ್ಸೆ, ವೈಜ್ಞಾನಿಕವಾಗಿ ದೃಢಪಟ್ಟಿರದ ಮತ್ತು ಪ್ರಯೋಗಾತ್ಮಕ ಪರೀಕ್ಷೆಗಳು ವಿಮಾ ವ್ಯಾಪ್ತಿಯಿಂದ ಹೊರಗಿರುತ್ತವೆ. ವಿಮಾ ಕರಾರಿನಲ್ಲೇ ಒಪಿಡಿ ವೆಚ್ಚ ಭರಿಸುವ ಉಲ್ಲೇಖವಿಲ್ಲದಿದ್ದರೆ ಅಂಥ ವೆಚ್ಚಗಳಿಗೂ ವಿಮಾ ಪರಿಹಾರ ಲಭಿಸುವುದಿಲ್ಲ.

ಒಟ್ಟಿನಲ್ಲಿ, ವಿಮೆ ಮಾಡಿಸುವುದಕ್ಕೂ ಮುನ್ನ ಪಾಲಿಸಿಯು ಏನನ್ನು ಒಳಗೊಂಡಿದೆ ಮತ್ತು ಏನನ್ನು ಹೊರಗಿಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದಿರುವುದು ಸೂಕ್ತ.

(ಲೇಖಕ: ಮಣಿಪಾಲ್‌ ಸಿಗ್ನಾ ಹೆಲ್ತ್‌ಕೇರ್‌
ಇನ್ಶುರನ್ಸ್‌ನ ಎಂಡಿ ಮತ್ತು ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.