ADVERTISEMENT

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್

ಪಿಟಿಐ
Published 11 ಜೂನ್ 2021, 16:29 IST
Last Updated 11 ಜೂನ್ 2021, 16:29 IST

ನವದೆಹಲಿ: ಮುಂಬೈ ಷೇರುಪೇಟೆಯ ಪಾಲಿಗೆ ಶುಕ್ರವಾರ ಸ್ಮರಣೀಯ ದಿನವಾಗಿತ್ತು. ದಿನದ ವಹಿವಾಟಿನ ನಡುವಿನಲ್ಲಿ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯ ಮಟ್ಟವಾದ 52,641 ಅಂಶಗಳಿಗೆ ತಲುಪಿತ್ತು. ವಹಿವಾಟಿನ ಕೊನೆಯಲ್ಲಿ, ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ₹ 231 ಲಕ್ಷ ಕೋಟಿಗೆ ತಲುಪಿತು.

ಕೇವಲ ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 3.26 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 174 ಅಂಶ ಏರಿಕೆ ಕಂಡಿತು. 52,474 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಡಾ ರೆಡ್ಡೀಸ್, ಪವರ್‌ಗ್ರಿಡ್, ಟಿಸಿಎಸ್, ಇನ್ಫೊಸಿಸ್, ಎಚ್‌ಸಿಎಲ್‌ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡವು.

ಎಲ್‌ಆ್ಯಂಡ್‌ಟಿ, ಇಂಡಸ್‌ ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್‌, ಭಾರ್ತಿ ಏರ್‌ಟೆಲ್‌ ಮತ್ತು ಐಸಿಐಸಿ ಬ್ಯಾಂಕ್ ಷೇರುಗಳು ಕುಸಿತ ಕಂಡವು. ‘ಷೇರು ಮಾರುಕಟ್ಟೆಯು ಭವಿಷ್ಯದ ಕಡೆ ನೋಟ ಹರಿಸಿದೆ. ಅನ್‌ಲಾಕ್‌ ನಂತರದಲ್ಲಿ ಆರ್ಥಿಕ ಪುನಶ್ಚೇತನ ಆಗಲಿದೆ ಎಂಬ ಭರವಸೆ, ಈ ವರ್ಷದಲ್ಲಿ ಹೆಚ್ಚಿನವರಿಗೆ ಕೋವಿಡ್ ಲಸಿಕೆ ಸಿಗಲಿದೆ ಎಂಬ ನಂಬಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಸೃಷ್ಟಿಸಿವೆ. ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಗಳ ಫಲಿತಾಂಶ ಉತ್ತೇಜನಕಾರಿ ಆಗಿದೆ’ ಎಂದು ಯೆಸ್ ಸೆಕ್ಯುರಿಟೀಸ್‌ನ ಅಮರ್ ಅಂಬಾನಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.