ADVERTISEMENT

ಮೆಮೊರಿ ಕಾರ್ಡ್‌ ಬದಲಾಗಲಿದೆ

ಪೃಥ್ವಿರಾಜ್ ಎಂ ಎಚ್
Published 20 ನವೆಂಬರ್ 2018, 19:30 IST
Last Updated 20 ನವೆಂಬರ್ 2018, 19:30 IST
ಹುವಾವೆ ನ್ಯಾನೊ ಮೆಮೊರಿ ಕಾರ್ಡ್
ಹುವಾವೆ ನ್ಯಾನೊ ಮೆಮೊರಿ ಕಾರ್ಡ್   

ಈಚೆಗೆ ಮೆಮೊರಿ ಸಾಮರ್ಥ್ಯ ಹೆಚ್ಚಾಗಿರುವ ಮೊಬೈಲ್‌ಗಳು ಬಳಕೆಗೆ ಬರುತ್ತಿರುವುದರಿಂದ ಪ್ರತ್ಯೇಕ ಮೆಮೊರಿ ಕಾರ್ಡ್‌ಗಳ ಅಗತ್ಯ ಕಡಿಮೆಯಾಗುತ್ತಿದೆ. ಆದರೆ, ಮೊಬೈಲ್‌ನಲ್ಲಿ ಸಿಮ್‌ಕಾರ್ಡ್‌ಗೆ ಇರುವಷ್ಟು ಮಹತ್ವ ಮೆಮೊರಿ ಕಾರ್ಡ್‌ಗೂ ಇದೆ. ಇದನ್ನೇ ಮೈಕ್ರೊ ಎಸ್‌ಡಿ ಕಾರ್ಡ್‌ ಎಂತಲೂ ಕರೆಯುತ್ತಾರೆ.

ಈಗ ಈ ಕಾರ್ಡ್‌ಗಳ ಸ್ವರೂಪ ಬದಲಾಗುವ ಕಾಲ ಬಂದಿದೆ. ಮುಂದಿನ ದಿನಗಳಲ್ಲಿ ಇದು ‘ನ್ಯಾನೊ ಮೆಮೊರಿ ಕಾರ್ಡ್‌’ ರೂಪದಲ್ಲಿ ಸಿಗಲಿದೆ. ‘ಹುವಾವೆ 20 ಪ್ರೊ’ ಸ್ಮಾರ್ಟ್‌ಫೋನ್‌ನಲ್ಲಿ ಈಗಾಗಲೇ ಈ ಕಾರ್ಡ್‌ ಅಳವಡಿಸಲಾಗಿದೆ.

ಇದು ಹೆಸರಿಗೆ ತಕ್ಕಂತೆ ಈಗ ಬಳಕೆಯಲ್ಲಿರುವ ಮೆಮೊರಿ ಕಾರ್ಡ್‌ಗಿಂತಲೂ ಶೇ 40ರಷ್ಟು ಪುಟ್ಟದಾಗಿರಲಿದೆ. ನೋಡುವುದಕ್ಕೆ ಥೇಟ್‌ ನ್ಯಾನೊ ಸಿಮ್‌ಕಾರ್ಡ್‌ನಂತೆಯೇ ಕಾಣುತ್ತದೆ. ಕಾರ್ಯ ವಿಧಾನದಲ್ಲಿ ಹೆಚ್ಚೇನೂ ವ್ಯತ್ಯಾಸಗಳಿಲ್ಲ. ಇದು ಕೂಡ ಮೈಕ್ರೊ ಎಸ್‌ಡಿ ಕಾರ್ಡ್‌ನಂತೆ 90 ಎಂಬಿಪಿಎಸ್‌ ವೇಗದಲ್ಲಿ ದತ್ತಾಂಶವನ್ನು ವರ್ಗಾವಣೆ ಮಾಡುತ್ತದೆ.

ADVERTISEMENT

ಪ್ರಸ್ತುತ ಇವುಗಳ ದತ್ತಾಂಶ ಸಂಗ್ರಹ ಸಾಮರ್ಥ್ಯ 128 ಜಿಬಿ, 256 ಜಿಬಿ ಮಟ್ಟದಲ್ಲಿ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಇವನ್ನು ನ್ಯಾನೊ ಸಿಮ್‌ಕಾರ್ಡ್‌ಗಳನ್ನು ಇಡುವ ಸ್ಲಾಟ್‌ಗಳಲ್ಲೇ ಇಟ್ಟು ಬಳಸಬಹುದು. ಈಗ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಮೊಬೈಲ್‌ಗಳಲ್ಲಿ ಮೆಮೊರಿ ಕಾರ್ಡ್‌ ಮತ್ತು ಸಿಮ್‌ ಎರಡೂ ಬಳಸಬಹುದಾದಂತಹ ಹೈಬ್ರಿಡ್ ಸಿಮ್‌ ಸ್ಲಾಟ್‌ಗಳನ್ನೇ ಅಳವಡಿಸಲಾಗುತ್ತಿದೆ. ಇವುಗಳಲ್ಲೇ ನ್ಯಾನೊ ಸಿಮ್‌ಕಾರ್ಡ್‌ಗಳು ಇಡುವ ಸೌಲಭ್ಯ ಬಂದರೆ ಬಳಕೆ ಸುಲಭ.

ಸದ್ಯಕ್ಕೆ ಹುವಾವೆ 20, ಹುವಾವೆ 20 ಪ್ರೊ ಫೋನ್‌ಗಳಲ್ಲಿ ಮಾತ್ರ ಈ ನ್ಯಾನೊ ಮೆಮೊರಿ ಕಾರ್ಡ್‌ಗಳನ್ನು ಬಳಸಬಹುದು. ಇ ಕಾರ್ಡ್‌ಗಳ ಬೆಲೆ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಭವಿಷ್ಯದಲ್ಲಿ ಮತ್ತಷ್ಟು ಸಂಸ್ಥೆಗಳು ನ್ಯಾನೊ ಸಿಮ್‌ಕಾರ್ಡ್‌ಗೆ ಹೊಂದುವಂತಹ ಮೊಬೈಲ್‌ಫೋನ್‌ಗಳನ್ನು ತಯಾರಿಸುವ ಸಾಧ್ಯತೆ ಇದೆ.ಹೀಗಾಗಿ ಇವು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದ ಮೇಲೆ ಮೈಕ್ರೊ ಎಸ್‌ಡಿ ಕಾರ್ಡ್‌ಗಳ ಬೆಲೆಗೇ ದೊರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.