ಗುರುಗ್ರಾಮ: ಜುಲೈನ ಮೊದಲ ವಾರದಿಂದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಹೆಕ್ಟರ್ ವಿತರಣೆ ಆರಂಭವಾಗಲಿದೆ ಎಂದು ಎಂಜಿ ಮೋಟರ್ಸ್‌ಇಂಡಿಯಾ ಕಂಪನಿ ತಿಳಿಸಿದೆ.
₹ 12.18 ಲಕ್ಷದಿಂದ ₹ 16.88 ಲಕ್ಷದವರೆಗಿನ ಪರಿಚಯಾತ್ಮಕ ಬೆಲೆ ನಿಗದಿ ಮಾಡಲಾಗಿದೆ.ಗುರುಗ್ರಾಮದ ತಯಾರಿಕಾ ಘಟಕದಲ್ಲಿ ಈ ಎಸ್‌ಯುವಿ ಬಿಡುಗಡೆ ಮಾಡಲಾಯಿತು.1.5 ಲೀಟರ್ ಟರ್ಬೊ ಚಾರ್ಜಡ್ ಪೆಟ್ರೋಲ್ ಮತ್ತು 2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಯಲ್ಲಿ 48 ವೋಲ್ಟ್ ಹೈಬ್ರಿಡ್ ಆಯ್ಕೆಯೂ ಇದೆ.
ಭಾರತದಲ್ಲಿ ಕಂಪನಿಯ ಮೊದಲ ಎಸ್‌ಯುವಿ ಇದಾಗಿದ್ದು, ಈ ವರ್ಷದಲ್ಲಿಯೇ ಎಲೆಕ್ಟ್ರಿಕ್ ಎಸ್‌ಯುವಿ ‘ಇಜೆಡ್‌ಎಸ್’ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ.
‘ಜೂನ್ 4ರಿಂದ ಇಲ್ಲಿಯವರೆಗೆ 10 ಸಾವಿರ ಎಸ್‌ಯುವಿಗೆ ಬುಕಿಂಗ್ ಬಂದಿದೆ. ಬೆಲೆ ಎಷ್ಟು ಎನ್ನುವುದು ಗೊತ್ತಿರದೇ ಇದ್ದರೂ ಗ್ರಾಹಕರು ಖರೀದಿಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ’ ಎಂದು ಕಂಪನಿಯ ಅಧ್ಯಕ್ಷ ರಾಜೀವ್ ಛಬ್ಬಾ ತಿಳಿಸಿದ್ದಾರೆ.
ಭಾರತದಲ್ಲಿ ವಾಹನ ಮಾರಾಟ 11 ತಿಂಗಳಿನಿಂದ ಇಳಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಹೆಕ್ಟರ್ ಬಿಡುಗಡೆ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ, ‘ತಿಂಗಳಿಗೆ 2 ಸಾವಿರ ಎಸ್‌ಯುವಿ ತಯಾರಿಕೆ ಮಾಡಲಾಗುತ್ತಿದೆ. ಒಂದೊಮ್ಮೆ ಕೆಲವು ಬುಕಿಂಗ್ ರದ್ದಾದರೂ, ಅಷ್ಟೇನೂ ಪರಿಣಾಮ ಬೀರುವುದಿಲ್ಲ’ ಎಂದಿದ್ದಾರೆ.
ಅಂಕಿ–ಅಂಶ
₹ 2,200 ಕೋಟಿ - ಭಾರತದಲ್ಲಿ ವಹಿವಾಟು ಸ್ಥಾಪನೆಗೆ ಹೂಡಿಕೆ
₹ 5 ಸಾವಿರ ಕೋಟಿ - ಮುಂದಿನ ನಾಲ್ಕು ವರ್ಷಗಳಲ್ಲಿ ಮಾಡಲಿರುವ ಹೂಡಿಕೆ
80 ಸಾವಿರ - ಒಂದು ವರ್ಷಕ್ಕೆ ತಯಾರಿಕಾ ಸಾಮರ್ಥ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.