ADVERTISEMENT

ಬಡ್ಡಿ ದರ ಕಡಿಮೆ ಮಟ್ಟದಲ್ಲಿರಲಿ: ಕಿರು ಹಣಕಾಸು ಸಂಸ್ಥೆಗಳಿಗೆ ನಾಗರಾಜು ಸಲಹೆ

ಪಿಟಿಐ
Published 13 ನವೆಂಬರ್ 2025, 15:50 IST
Last Updated 13 ನವೆಂಬರ್ 2025, 15:50 IST
   

ನವದೆಹಲಿ: ಹಣಕಾಸಿನ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಕಿರು ಹಣಕಾಸು ಸಂಸ್ಥೆಗಳು ತಮ್ಮ ಬಡ್ಡಿ ದರವನ್ನು ಕೈಗೆಟಕುವ ಮಟ್ಟದಲ್ಲಿ ಇರಿಸಬೇಕು ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ಹೇಳಿದ್ದಾರೆ.

‘ಕೆಲವು ಕಿರು ಹಣಕಾಸು ಸಂಸ್ಥೆಗಳು ಅಸಹನೀಯ ಮಟ್ಟದಲ್ಲಿ ಬಡ್ಡಿ ದರವನ್ನು ನಿಗದಿ ಮಾಡಿರುವುದನ್ನು ನಾನು ನೋಡಿದ್ದೇನೆ. ಇದಕ್ಕೆ ಕಾರಣ ಆ ಕಿರು ಹಣಕಾಸು ಸಂಸ್ಥೆಗಳಲ್ಲಿನ ಅಸಾಮರ್ಥ್ಯ’ ಎಂದು ನಾಗರಾಜು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕಿರು ಹಣಕಾಸು ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು, ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಲು ವಿಫಲವಾದ ಕಾರಣಕ್ಕೆ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುತ್ತಿರಬಹುದು ಎಂದು ಅವರು ಹೇಳಿದ್ದಾರೆ.

ADVERTISEMENT

ಸಂಸ್ಥೆಗಳು ವೆಚ್ಚಗಳಲ್ಲಿ ದಕ್ಷತೆಯನ್ನು ಸಾಧಿಸಬೇಕು, ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸಬೇಕು. ಅದರ ಮೂಲಕ ಸಾಲಗಾರರಿಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವಂತೆ ಆಗಬೇಕು ಎಂದು ನಾಗರಾಜು ಅವರು ಕಿವಿಮಾತು ಹೇಳಿದ್ದಾರೆ.

ಹಣದ ಅಗತ್ಯ ತೀವ್ರವಾಗಿ ಇರುವವರು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆಯಬಹುದು. ಆದರೆ ಅವರಿಗೆ ಆ ಸಾಲವನ್ನು ಮರುಪಾವತಿಸಲು ಆಗುವುದಿಲ್ಲ. ಇದರ ಪರಿಣಾಮವು ಹಣಕಾಸು ವ್ಯವಸ್ಥೆಯ ಮೇಲೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಿರು ಹಣಕಾಸು ಸಂಸ್ಥೆಗಳು ದೇಶದಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಸಾಧಿಸಲು ಬಹಳ ಮುಖ್ಯ. ಈ ಸಂಸ್ಥೆಗಳು ಮನೆಬಾಗಿಲಿಗೆ ತೆರಳಿ ಸಾಲ ನೀಡುವ ಕಾರಣದಿಂದಾಗಿ ಇವು ಮಹಿಳೆಯರ ಸಬಲೀಕರಣಕ್ಕೂ ಬಹಳ ಅಗತ್ಯ ಎಂದು ಅವರು ಹೇಳಿದ್ದಾರೆ.

‘ಹಣಕಾಸಿನ ಒಳಗೊಳ್ಳುವಿಕೆಯ ವ್ಯಾಪ್ತಿಗೆ ನಾವು ಇನ್ನೂ ಅಂದಾಜು 35 ಕೋಟಿಯಷ್ಟು ಯುವಕರನ್ನು ತರಬೇಕಿದೆ. ಸರ್ಕಾರ ರೂಪಿಸಿರುವ ಯೋಜನೆಗಳು ಹಲವಿದ್ದರೂ, ದೇಶದ ಜನಸಂಖ್ಯೆಯಲ್ಲಿ ದೊಡ್ಡ ವರ್ಗವೊಂದು ಹಣಕಾಸಿನ ಒಳಗೊಳ್ಳುವಿಕೆಯ ತೆಕ್ಕೆಗೆ ಬಂದಿಲ್ಲ. ಈ ಬಗ್ಗೆ ಕಿರು ಹಣಕಾಸು ಸಂಸ್ಥೆಗಳು ಆದ್ಯತೆ ನೀಡಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.