ADVERTISEMENT

ದೇಶದ ಹಾಲು ಉತ್ಪಾದನೆ ಶೇ 4ರಷ್ಟು ಹೆಚ್ಚಳ: ಕರ್ನಾಟಕವೇ ಮುಂದು

ಪಿಟಿಐ
Published 26 ನವೆಂಬರ್ 2023, 16:26 IST
Last Updated 26 ನವೆಂಬರ್ 2023, 16:26 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ಹಾಲು ಉತ್ಪಾದನೆ 2022–23ರಲ್ಲಿ ಶೇ 4ರಷ್ಟು ಹೆಚ್ಚಳವಾಗಿ 23.58 ಕೋಟಿ ಟನ್‌ಗೆ ತಲುಪಿದೆ. ಮೊಟ್ಟೆ ಉತ್ಪಾದನೆ ಶೇ 7ರಷ್ಟು ಏರಿಕೆಯಾಗಿ 13,838 ಕೋಟಿಗೆ ತಲುಪಿದೆ ಎಂದು ಸರ್ಕಾರ ಭಾನುವಾರ ತಿಳಿಸಿದೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್ ರೂಪಾಲಾ ಅವರು ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಹಾಲು ದಿನದ ಕಾರ್ಯಕ್ರಮದಲ್ಲಿ 2023ರ (ಹಾಲು, ಮೊಟ್ಟೆ, ಮಾಂಸ ಮತ್ತು ಉಣ್ಣೆ ಉತ್ಪಾದನೆ 3) ಪಶುಸಂಗೋಪನೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರು.

ಈ ಅಂಕಿ ಅಂಶವು ಪ್ರಾಣಿಗಳ ಸಮಗ್ರ ಮಾದರಿ ಸಮೀಕ್ಷೆ (2022ರ ಮಾರ್ಚ್‌–2023 ಫೆಬ್ರವರಿ) ಆಧಾರಿತವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ADVERTISEMENT

ದೇಶದಲ್ಲಿ ಒಟ್ಟು ಹಾಲು ಉತ್ಪಾದನೆ 2022–23ರಲ್ಲಿ 23.58 ಕೋಟಿ ಟನ್‌ ಎಂದು ಅಂದಾಜಿಸಲಾಗಿದೆ. 2021–22ರ ಅಂದಾಜಿಗಿಂತ ಶೇ 3.83ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಸಚಿವರು ತಿಳಿಸಿದರು.

ವಾರ್ಷಿಕ ಬೆಳವಣಿಗೆ ದರ 2018–19ರಲ್ಲಿ ಶೇ 6.47,  2019–20ರಲ್ಲಿ ಶೇ 5.69, 2020–21ರಲ್ಲಿ ಶೇ 5.81 ಮತ್ತು 2021–22ರಲ್ಲಿ ಶೇ 5.77 ಇತ್ತು ಎಂದು ಮಾಹಿತಿ ತಿಳಿಸಿದೆ.

2022-23ರಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸಿದ ರಾಜ್ಯ ಉತ್ತರ ಪ್ರದೇಶವಾಗಿದ್ದು, ಒಟ್ಟು ಹಾಲು ಉತ್ಪಾದನೆಯಲ್ಲಿ ಶೇ 15.72ರಷ್ಟು ಪಾಲು ಹೊಂದಿದೆ. ನಂತರ ರಾಜಸ್ಥಾನ (ಶೇ. 14.44), ಮಧ್ಯಪ್ರದೇಶ (ಶೇ. 8.73), ಗುಜರಾತ್ (ಶೇ. 7.49), ಮತ್ತು ಆಂಧ್ರಪ್ರದೇಶ (ಶೇ. 6.70) ಇವೆ.

ಕರ್ನಾಟಕದಲ್ಲಿ ಬೆಳವಣಿಗೆ ದರ ಹೆಚ್ಚು:  ಹಿಂದಿನ ವರ್ಷಕ್ಕೆ ಹೋಲಿಸಿದರೆ ವಾರ್ಷಿಕ ಬೆಳವಣಿಗೆ ದರದಲ್ಲಿ, ಕರ್ನಾಟಕವು ಶೇ 8.76 ಅತ್ಯಧಿಕ ದರವನ್ನು ಹೊಂದಿದೆ. ಪಶ್ಚಿಮ ಬಂಗಾಳ (ಶೇ 8.65) ಮತ್ತು ಉತ್ತರ ಪ್ರದೇಶ (ಶೇ 6.99) ನಂತರದ ಸ್ಥಾನಗಳಲ್ಲಿ ಇವೆ. ಮೊಟ್ಟೆಯ ಉತ್ಪಾದನೆಯು 2022-23ರಲ್ಲಿ 13,838 ಕೋಟಿ ಎಂದು ಅಂದಾಜಿಸಿದ್ದು, 2018-19ರಲ್ಲಿ 10,380 ಕೋಟಿ ಇತ್ತು.

ಮೊಟ್ಟೆಯ ಉತ್ಪಾದನೆಯು 2021-22ಕ್ಕಿಂತ 2022-23 ರಲ್ಲಿ ಶೇ 6.77ರಷ್ಟು ಹೆಚ್ಚಾಗಿದೆ. ಆಂಧ್ರಪ್ರದೇಶ ಹೆಚ್ಚು ಮೊಟ್ಟೆ ಉತ್ಪಾದಿಸಿದ (ಶೇ 20.13) ರಾಜ್ಯವಾಗಿದೆ. ತಮಿಳುನಾಡು (ಶೇ 15.58), ತೆಲಂಗಾಣ (ಶೇ 12.77), ಪಶ್ಚಿಮ ಬಂಗಾಳ (ಶೇ 9.94) ಮತ್ತು ಕರ್ನಾಟಕ (ಶೇ 6.51) ನಂತರದ ಸ್ಥಾನಗಳಲ್ಲಿ ಇವೆ. 2022-23ರಲ್ಲಿ ಭಾರತದ ಉಣ್ಣೆ ಉತ್ಪಾದನೆಯು ಶೇ 2ರಷ್ಟು ಏರಿಕೆಯಾಗಿ 3.36 ಕೋಟಿ ಕೆಜಿಗೆ ತಲುಪಿದೆ. ಹಿಂದಿನ ವರ್ಷಕ್ಕಿಂತ 2022-23ರಲ್ಲಿ ಮಾಂಸ ಉತ್ಪಾದನೆಯು ಶೇ 5 ರಷ್ಟು ಏರಿಕೆಯಾಗಿ 97 ಲಕ್ಷ ಟನ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.