ADVERTISEMENT

‘ಎಂಎಸ್‌ಎಂಇ’ ಉದ್ಯಮ ಸಲಹೆ

ಮದನ್ ಪದಕಿ
Published 29 ಜುಲೈ 2020, 21:10 IST
Last Updated 29 ಜುಲೈ 2020, 21:10 IST
ಮದನ್‌ ಪದಕಿ
ಮದನ್‌ ಪದಕಿ   

ಸರಿತಾ, ಬೆಂಗಳೂರು

ಪ್ರಶ್ನೆ: ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸ್ವಯಂಸೇವಾ ಸಂಸ್ಥೆಯನ್ನು ನಾವು ನಡೆಸುತ್ತಿದ್ದೇವೆ. ಪ್ರೌಢಶಾಲಾ ಮಕ್ಕಳಿಗೆ ನಾವು ಪಠ್ಯವನ್ನು ಕನ್ನಡದಲ್ಲಿ ಸಿದ್ಧಪಡಿಸಿದ್ದೇವೆ. ಕರ್ನಾಟಕ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳನ್ನು ತಲುಪುವುದು ನಮ್ಮ ಗುರಿ. ಆದರೆ, ಈ ಪ್ರದೇಶಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ಕಡಿಮೆ. ಇದು ನಾವು ಎದುರಿಸುತ್ತಿರುವ ಸವಾಲು. ಶಾಲಾ ಮಕ್ಕಳಿಗಾಗಿ ಸ್ಮಾರ್ಟ್ ಫೋನ್ ಒದಗಿಸುವ ಸರ್ಕಾರಿ ಯೋಜನೆ ಇದೆಯೇ?

ಉತ್ತರ: ದುರದೃಷ್ಟವಶಾತ್, ಪ್ರಸ್ತುತ ಈ ರೀತಿಯ ಯಾವುದೇ ಸರ್ಕಾರಿ ಯೋಜನೆಗಳು ಇಲ್ಲ. ಆದರೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಎಸ್‌ಆರ್) ಅಡಿಯಲ್ಲಿ ನಿಮ್ಮ ಯೋಜನೆಗೆ ಬೆಂಬಲ ನೀಡಬಹುದಾದ ಪ್ರಮುಖ ಕಂಪನಿಗಳನ್ನು ನೀವು ಸಂಪರ್ಕಿಸಬಹುದು.

ADVERTISEMENT

ಪ್ರಸನ್ನ, ಬಾಗಲಕೋಟೆ.

ಪ್ರಶ್ನೆ: ಕಳೆದ ವರ್ಷ ನಾನು ಹಣ್ಣುಗಳ ಪೇಸ್ಟ್ ಸಂಸ್ಕರಿಸುವ ಘಟಕವೊಂದನ್ನು ಖರೀದಿಸಿದ್ದು, ಈ ಘಟಕವನ್ನು ನನ್ನ ವ್ಯಾನ್‌ನಲ್ಲಿ ಅಳವಡಿಸಿದ್ದೇನೆ. ಈ ವಾಹನವನ್ನು ನನ್ನ ಜಮೀನಿನವರೆಗೆ ಚಾಲನೆ ಮಾಡಿಕೊಂಡು ಹೋಗಿ ಸ್ಥಳದಲ್ಲಿಯೇ ತಾಜಾ ಹಣ್ಣುಗಳನ್ನು ಸಂಸ್ಕರಿಸುತ್ತೇನೆ. ತಾಜಾ ಹಣ್ಣುಗಳನ್ನೇ ಬಳಸುವುದರಿಂದ ಈ ಘಟಕದಿಂದ ತಯಾರಾದ ಉತ್ಪನ್ನ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇದನ್ನು ನಾನು ಪ್ರತಿದಿನವೂ ಬಳಸುವ ಅಗತ್ಯ ಇರುವುದಿಲ್ಲ. ತಿಂಗಳಲ್ಲಿ 10ರಿಂದ 12 ದಿನಗಳ ಕಾಲ ಈ ವಾಹನ ಬಳಕೆಯಾಗುವುದಿಲ್ಲ. ಈ ಸಮಯದಲ್ಲಿ ನನ್ನ ವಾಹನವನ್ನು ಬಾಡಿಗೆಗೆ ನೀಡುವ ಯೋಜನೆ ಹೊಂದಿದ್ದೇನೆ. ಬಾಡಿಗೆಗಾಗಿ ಎಷ್ಟು ಮೊತ್ತ ಪಡೆಯಬೇಕೆಂದು ನನಗೆ ತಿಳಿದಿಲ್ಲ. ತಾವು ದಯವಿಟ್ಟು ಸಹಾಯ ಮಾಡುವಿರಾ?

ಉತ್ತರ: ಲಭ್ಯವಿರುವ ಸೌಕರ್ಯವನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ ಹೆಚ್ಚಿನ ವರಮಾನ ಪಡೆಯಲು ಸಾಧ್ಯವಾಗುತ್ತದೆ. ಒಂದು ತಿಂಗಳಿಗೆ ನಿಮ್ಮ ವ್ಯಾನ್ ಚಾಲನೆ ಮಾಡಲು ಆಗುವ ಖರ್ಚನ್ನು ಲೆಕ್ಕ ಹಾಕಬೇಕಾಗುತ್ತದೆ. ಈ ಮೊತ್ತ ನಿರ್ಧರಿಸುವಾಗ, ವ್ಯಾನ್ ಮತ್ತು ಯಂತ್ರೋಪಕರಣದ ಬುಕ್ ವ್ಯಾಲ್ಯು, ಕೆಲಸಗಾರರ ಸಂಖ್ಯೆ, ನಿಮ್ಮ ಉದ್ಯಮಕ್ಕೆ ಬಳಸುವ ಇತರೆ ಸಾಮಗ್ರಿಗಳು, ಸವಕಳಿ ಇತ್ಯಾದಿಗಳನ್ನು ಪರಿಗಣಿಸಬೇಕು. ನಂತರ, ದಿನವೊಂದಕ್ಕೆ ವ್ಯಾನ್ ಚಾಲನೆ ಮಾಡಲು ತಗಲುವ ಖರ್ಚನ್ನು ಲೆಕ್ಕ ಹಾಕಿ, ಈ ಮೊತ್ತಕ್ಕೆ ನಿಮ್ಮ ಲಾಭವನ್ನು ಸೇರಿಸಿ ಬಾಡಿಗೆ ನಿರ್ಧರಿಸಬೇಕು. ಬಾಡಿಗೆ ಪಡೆಯಲು ಇಚ್ಛಿಸುವ ಗ್ರಾಹಕರಿದ್ದಲ್ಲಿ ಅವರು ತೆರಲು ಸಿದ್ಧವಿರುವ ಬಾಡಿಗೆ ಮೊತ್ತವನ್ನು ತಿಳಿದುಕೊಳ್ಳಿ. ಹೀಗೆ ಮಾಡುವಾಗ ನಿಮ್ಮ ವಾಹನವನ್ನು ಬಾಡಿಗೆಗೆ ತೆಗೆದುಕೊಳ್ಳುವುದರಿಂದ ದೊರಕುವ ಪ್ರಯೋಜನವನ್ನು ಗ್ರಾಹಕರಿಗೆ ನೀವು ವಿವರಿಸಬೇಕು.

ರಂಗ್ನೇಕರ್, ಬೆಳಗಾವಿ

ಪ್ರಶ್ನೆ: ಸೆಲ್ಲೋ ಟೇಪ್‌ಗಳನ್ನು ತಯಾರು ಮಾಡುವ ಯಂತ್ರವನ್ನು ನಾನು ಮನೆಯಲ್ಲಿ ಹೊಂದಿದ್ದೇನೆ. ಈ ಯಂತ್ರವನ್ನು ನಾನು ಕಳೆದ ಎರಡು ವರ್ಷಗಳಿಂದ ಬಳಸುತ್ತಿದ್ದೇನೆ. ಟೇಪ್‌ಗಳನ್ನು ತಯಾರಿಸಲು ಬಳಸುವ ಕಚ್ಚಾ ಸಾಮಗ್ರಿಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವುದು ನನ್ನ ಉದ್ದೇಶ. ಆದರೆ, ನನಗೆ ಕಚ್ಚಾ ಸಾಮಗ್ರಿ ಸರಬರಾಜು ಮಾಡುವವರು ನನ್ನ ಆರ್ಡರ್ ಮೊತ್ತದ ಮೇಲೆ ಯಾವುದೇ ಡಿಸ್ಕೌಂಟ್ ನೀಡಲು ತಯಾರಿಲ್ಲ. ಅವರೊಡನೆ ನಾನು ಯಾವ ರೀತಿಯಲ್ಲಿ ಬೆಲೆ ನಿಷ್ಕರ್ಷೆ ಮಾಡಬಹುದು?

ಉತ್ತರ: ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದಾಗ ಡಿಸ್ಕೌಂಟ್ ನೀಡುವುದು ಯಾವುದೇ ಉದ್ಯಮದಲ್ಲಿರುವ ಪರಿಪಾಠ. ಒಂದು ಪರಿಹಾರವೆಂದರೆ, ಡಿಸ್ಕೌಂಟ್ ನೀಡುವ ಬದಲೀ (ಪರ್ಯಾಯ) ಕಚ್ಚಾ ಮಾಲು ಸರಬರಾಜುದಾರರನ್ನು ಹುಡುಕುವುದು. ಅಥವಾ, ಕಚ್ಚಾ ಮಾಲು ಖರೀದಿ ಮಾಡಲು ಬ್ಯಾಂಕ್ ಸಾಲ ಪಡೆದು, ಹೆಚ್ಚಿನ ಪ್ರಮಾಣದ ಖರೀದಿಗೆ ತಕ್ಷಣವೇ ಹಣ ಪಾವತಿ ಮಾಡಿ ನೀವು ಇನ್ನೂ ಹೆಚ್ಚಿನ ಡಿಸ್ಕೌಂಟ್ ಪಡೆಯಬಹುದಾಗಿದೆ.

(ಗ್ಲೋಬಲ್‌ ಅಲಯನ್ಸ್‌ ಫಾರ್‌ ಮಾಸ್‌ ಎಂಟರ್‌ಪ್ರಿನ್ಯೂಅರ್‌ಶಿಪ್‌ (ಜಿಎಎಂಇ) ಸಹ ಸ್ಥಾಪಕ ಮದನ್‌ ಪದಕಿ ಅವರು ಉದ್ಯಮಿಗಳು ಎದುರಿಸುತ್ತಿರುವ ಬಿಕ್ಕಟ್ಟಿಗೆ ಇಲ್ಲಿ ಪರಿಹಾರ ಸೂಚಿಸುತ್ತಾರೆ. ಪ್ರಶ್ನೆ, ಸಲಹೆಗಳಿಗೆ ಸಹಾಯವಾಣಿ (73977 79520) ಮತ್ತು ಇ–ಮೇಲ್‌ gamesupportnetwork@massentrepreneurship.org ಸಂಪರ್ಕಿಸಬಹುದು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.