ನವದೆಹಲಿ: ಅಗ್ಗದ ದರದಲ್ಲಿ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಇಲ್ಲಿ ನಡೆಸಿದ ಸಭೆಯಲ್ಲಿ ಈ ಬೇಡಿಕೆ ಮುಂದಿಡಲಾಗಿದೆ. ವಿವಿಧ ವಲಯಗಳ ಪ್ರತಿನಿಧಿಗಳ ಜತೆ ಚರ್ಚೆ ನಡೆಸಲು ನಿರ್ಮಲಾ ನಿರ್ಧರಿಸಿದ್ದು, ಇದು ಮೊದಲ ಸಭೆಯಾಗಿದೆ.
ಬ್ಯಾಂಕ್‌ಗಳು ಸಕಾಲದಲ್ಲಿ ಸಾಲ ಮಂಜೂರು ಮಾಡಬೇಕು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಹಣ ಪಾವತಿ ವಿಳಂಬ ಮಾಡಿದರೆ ಅವುಗಳ ವಿರುದ್ಧ ಸರ್ಕಾರ ದೂರು ದಾಖಲಿಸಬೇಕು ಎಂದು ಉದ್ಯಮಿಗಳು ಒತ್ತಾಯಿಸಿದ್ದಾರೆ.
‘ಎಂಎಸ್‌ಎಂಇ’ ವಲಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಬ್ಯಾಂಕ್‌ಗಳು ವಾರದಲ್ಲಿ ಒಂದು ದಿನ ನಿಗದಿಪಡಿಸಲು ಸರ್ಕಾರ ಶೀಘ್ರದಲ್ಲಿಯೇ ಬ್ಯಾಂಕ್‌ಗಳಿಗೆ ಸೂಚಿಸುವ ಸಾಧ್ಯತೆ ಇದೆ.
‘ಎಂಎಸ್‌ಎಂಇ’ ಸಚಿವ ನಿತಿನ್ ಗಡ್ಕರಿ ಅವರೂ ಸಭೆಯಲ್ಲಿ ಭಾಗವಹಿಸಿದ್ದರು. ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 29ರಷ್ಟು ಕೊಡುಗೆ ನೀಡುವ ಮತ್ತು ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿ
ಸುವ ಈ ವಲಯಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಕಾಲದಲ್ಲಿ ಅಗತ್ಯ ಇರುವಷ್ಟು ಸಾಲ ಸಿಗದಿರುವುದು ಈ ವಲಯದ ಪ್ರಗತಿಗೆ ಪ್ರಮುಖ ಅಡ್ಡಿಯಾಗಿದೆ.
ಸಣ್ಣ ಉದ್ದಿಮೆದಾರರು ಬ್ಯಾಂಕೇತರ ವಲಯಗಳಿಂದ ದಾಖಲೆಗಳ ಕಿರಿಕಿರಿ ಇಲ್ಲದೆ ಆಸ್ತಿ ಅಡಮಾನ ಇರಿಸಿ ದುಬಾರಿ ಬಡ್ಡಿ ದರಕ್ಕೆ ಸುಲಭವಾಗಿ ಸಾಲ ಪಡೆಯುತ್ತಾರೆ. ಇದು ಹೊರೆಯಾಗಿ ಪರಿಣಮಿಸುತ್ತದೆ. ಬ್ಯಾಂಕ್‌ಗಳಿಂದ ಸುಲಭ ಸಾಲ ದೊರೆಯಬೇಕು ಮತ್ತು ಜಿಎಸ್‌ಟಿ ದರಗಳಲ್ಲಿ ರಿಯಾಯ್ತಿ ನೀಡಬೇಕು ಎನ್ನುವುದು ಈ ವಲಯದ ಪ್ರಮುಖ ಬೇಡಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.