ADVERTISEMENT

ಬ್ರಾಂಡ್ ಗಾರ್ಡಿಯನ್‌ಷಿಪ್ ಇಂಡೆಕ್ಸ್: ಮುಕೇಶ್ ಅಂಬಾನಿಗೆ ವಿಶ್ವದಲ್ಲೇ 2ನೇ ಸ್ಥಾನ

ಪಿಟಿಐ
Published 4 ಫೆಬ್ರುವರಿ 2024, 13:39 IST
Last Updated 4 ಫೆಬ್ರುವರಿ 2024, 13:39 IST
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ   

ನವದೆಹಲಿ: ಬ್ರಾಂಡ್ ಫೈನಾನ್ಸ್‌ನ ಬ್ರಾಂಡ್ ಗಾರ್ಡಿಯನ್‌ಷಿಪ್ ಇಂಡೆಕ್ಸ್–2024ರಲ್ಲಿ ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ಭಾರತೀಯರ ಪೈಕಿ ಮೊದಲ ಸ್ಥಾನ ಮತ್ತು ಜಾಗತಿಕ ಸಿಇಒಗಳ ಪೈಕಿ 2ನೇ ಸ್ಥಾನ ಗಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಛೇರ್ಮನ್ ಮತ್ತು ವ್ವವಸ್ಥಾಪಕ ನಿರ್ದೇಶಕರಾಗಿರುವ ಮುಕೇಶ್, ಮೈಕ್ರೊಸಾಫ್ಟ್‌ನ ಸತ್ಯಾ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ, ಆ್ಯಪಲ್ ಸಂಸ್ಥೆಯ ಟಿಮ್ ಕುಕ್, ಟೆಸ್ಲಾದ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದಾರೆ. ಟೆನ್ಸೆಂಟ್‌ನ ಹುವಾಟೆಂಗ್ ಮಾ ಮೊದಲ ಸ್ಥಾನದಲ್ಲಿದ್ದಾರೆ.

ನೌಕರರು, ಹೂಡಿಕೆದಾರರು ಮತ್ತು ಸಮಾಜಕ್ಕೆ ಸಮತೋಲಿತವಾಗಿ ಉದ್ಯಮದ ಮೌಲ್ಯವನ್ನು ಸುಸ್ಥಿರ ಮಾದರಿಯಲ್ಲಿ ಹೆಚ್ಚಿಸುವ ಆಧಾರದ ಮೇಲೆ ಗಾರ್ಡಿಯನ್‌ಷಿಪ್‌ ಇಂಡೆಕ್ಸ್ ಜಾಗತಿಕವಾಗಿ ಸಿಇಒಗಳನ್ನು ಗುರುತಿಸುತ್ತದೆ.

ADVERTISEMENT

ಟಾಟಾ ಸನ್ಸ್ ಛೇರ್ಮನ್‌ ಎನ್ ಚಂದ್ರಶೇಖರನ್ 5ನೇ ಸ್ಥಾನ ಪಡೆದಿದ್ದಾರೆ. 2013ರಲ್ಲಿ ಅವರು 8ನೇ ಸ್ಥಾನದಲ್ಲಿದ್ದರು. ಮಹೀಂದ್ರ ಆ್ಯಂಡ್ ಮಹೀದ್ರಾ ಸಿಇಒ ಅನಿಲ್ ಶಾ 6ನೇ ಸ್ಥಾನದಲ್ಲಿದ್ದರೆ, ಇನ್‌ಫೊಸಿಸ್‌ನ ಸಲೀಲ್ ಪರೇಖ್ 16ನೇ ಸ್ಥಾನದಲ್ಲಿದ್ದಾರೆ.

ಬ್ರಾಂಡ್ ಫೈನಾನ್ಸ್ ಸಮೀಕ್ಷೆಯಲ್ಲಿ ಅಂಬಾನಿಗೆ 80.3 ಅಂಕ ನೀಡಿದ್ದರೆ, ಹುವಾಟೆಂಗ್ ಮಾ ಅವರಿಗೆ 81.6 ಅಂಕ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.