Mutual Funds
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಸಲಹೆಗಾರರ ನೆರವು ಪಡೆದು ಹೂಡಿಕೆ ಮಾಡಬೇಕೇ ಅಥವಾ ನೇರವಾಗಿ ಹೂಡಿಕೆ ಮಾಡಬೇಕೇ ಎನ್ನುವ ಪ್ರಶ್ನೆಯು ಪ್ರತಿ ಹೂಡಿಕೆದಾರರಿಗೆ ಒಂದಲ್ಲ ಒಂದು ಹಂತದಲ್ಲಿ ಕಾಡುತ್ತದೆ.
ಪ್ರತಿ ಮ್ಯೂಚುವಲ್ ಫಂಡ್ ಎರಡು ಮಾದರಿಯಲ್ಲಿ ಬರುತ್ತದೆ. ಒಂದು ಡೈರೆಕ್ಟ್ ಮ್ಯೂಚುವಲ್ ಫಂಡ್; ಮತ್ತೊಂದು ರೆಗ್ಯುಲರ್ ಮ್ಯೂಚುವಲ್ ಫಂಡ್. ಡೈರೆಕ್ಟ್ ಫಂಡ್ ಅಂದರೆ ನೀವೇ ನೇರವಾಗಿ ಡೈರೆಕ್ಟ್ ಮ್ಯೂಚುವಲ್ ಫಂಡ್ ಆ್ಯಪ್‌ಗಳ ಮೂಲಕ ಅಥವಾ ನಿರ್ದಿಷ್ಟ ಮ್ಯೂಚುವಲ್ ಫಂಡ್ ಕಂಪನಿಗಳ ವೆಬ್‌ಸೈಟ್ ಮೂಲಕ ಖರೀದಿಸುವುದಾಗಿದೆ.
ರೆಗ್ಯುಲರ್ ಮ್ಯೂಚುವಲ್ ಫಂಡ್ ಎಂದರೆ ಮ್ಯೂಚುವಲ್ ಫಂಡ್ ಸಲಹೆಗಾರರು, ವಿತರಕರ ಮೂಲಕ ಹೂಡಿಕೆ ಮಾಡುವುದಾಗಿದೆ. ಐಸಿಐಸಿಐ ಪ್ರೂಡೆನ್ಶಿಯಲ್ ಬ್ಲೂಚಿಪ್ ಡೈರೆಕ್ಟ್ ಗ್ರೋಥ್ ಫಂಡ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು ನೋಡಿದಾಗ ಡೈರೆಕ್ಟ್ ಮತ್ತು ರೆಗ್ಯುಲರ್ ಪ್ಲಾನ್ ಎರಡೂ ಇರುವುದನ್ನು ಕಾಣಬಹುದು. ಈ ಎರಡು ಮಾದರಿಗಳ ಪೈಕಿ ಹೂಡಿಕೆದಾರರು ಯಾವುದನ್ನು ಆಯ್ಕೆ ಮಾಡಬೇಕು? ಬನ್ನಿ, ವಿವರವಾಗಿ ಇಲ್ಲಿ ಕಲಿಯೋಣ.
ಯಾವುದೇ ವ್ಯಕ್ತಿ ಮ್ಯೂಚುವಲ್ ಫಂಡ್ ಸಲಹೆಗಾರರ ಮೂಲಕ ಹೂಡಿಕೆ ಮಾಡಲು ಮುಂದಾದಾಗ ಮೊದಲಿಗೆ ಅವರು ನಿಮ್ಮ ಆರ್ಥಿಕ ಸ್ಥಿತಿಗತಿಯ ಅವಲೋಕನ ಮಾಡುತ್ತಾರೆ. ಎಷ್ಟು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೀರಿ. ಮಾಸಿಕ ಎಷ್ಟು ಹೂಡಿಕೆ ಮಾಡಲು ತಯಾರಿದ್ದೀರಿ. ಎಷ್ಟು ಅವಧಿಗೆ ಹೂಡಿಕೆ ಮುಂದುವರಿಸಬಹುದು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ನಂತರದಲ್ಲಿ ಎಲ್ಲಾ ಮಾಹಿತಿಯ ಅವಲೋಕನ ಮಾಡಿ ಯಾವ ರೀತಿ ಹೂಡಿಕೆ ಮಾಡಬೇಕು ಎನ್ನುವುದನ್ನು ತಿಳಿಸುತ್ತಾರೆ.
ಸಾಮಾನ್ಯವಾಗಿ ಈ ಸಲಹೆಗಾರರು ರೆಗ್ಯುಲರ್ ಫಂಡ್‌ಗಳನ್ನೇ ಸೂಚಿಸುತ್ತಾರೆ. ಸಲಹೆಗಾರರಿಂದ ತಿಳಿವಳಿಕೆ ಪಡೆದು ನೀವು ರೆಗ್ಯುಲರ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ, ಮ್ಯೂಚುವಲ್ ಫಂಡ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯು ಆ ಹೂಡಿಕೆ ಮೊತ್ತದಲ್ಲಿ ಒಂದು ಸಣ್ಣ ಪ್ರಮಾಣವನ್ನು ತೆಗೆದು ಸಲಹೆಗಾರರಿಗೆ ಕಮಿಷನ್ ರೂಪದಲ್ಲಿ ನೀಡುತ್ತದೆ. ಈ ರೀತಿಯಾಗಿ ಸಲಹೆಗಾರರು ಹಣ ಗಳಿಸುತ್ತಾರೆ.
ನನಗೆ ಫಂಡ್ ಸಲಹೆಗಾರರ ನೆರವು ಬೇಕಿಲ್ಲ. ನಾನೇ ನೇರವಾಗಿ ಫಂಡ್‌ಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡುತ್ತೇನೆ ಎಂದಾದರೆ ನೀವು ಡೈರೆಕ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಈ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಸಲಹೆಗಾರರಿಗೆ ಹೋಗುವ ಕಮಿಷನ್ ಇರುವುದಿಲ್ಲ. ಹಾಗಾಗಿ, ಈ ಫಂಡ್‌ಗಳಲ್ಲಿನ ಗಳಿಕೆಯು ರೆಗ್ಯುಲರ್ ಫಂಡ್‌ಗಳ ಗಳಿಕೆಗಿಂತ ಹೆಚ್ಚಿರುತ್ತದೆ.
ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳ ಬಗ್ಗೆ ಒಂದಷ್ಟು ಅರಿವಿದ್ದು, ವಿವಿಧ ಫಂಡ್‌ಗಳ ಬಗ್ಗೆ ತಿಳಿವಳಿಕೆ ಇದ್ದರೆ ಡೈರೆಕ್ಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು. ಇಂತಹ ಹೂಡಿಕೆದಾರರಿಗೆ ಸಲಹೆಗಾರರ ನೆರವು ಪಡೆಯುವ ಅಗತ್ಯ ಬೀಳುವುದಿಲ್ಲ.
ಆದರೆ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಮತ್ತು ಮಾರುಕಟ್ಟೆ ಏರಿಳಿತದ ಬಗ್ಗೆ ಸರಿಯಾದ ಅರಿವಿಲ್ಲ. ಫಂಡ್‌ಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದು ಗೊತ್ತಿಲ್ಲ. ಹೂಡಿಕೆ ಮತ್ತು ವಿಶ್ಲೇಷಣೆ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎನ್ನುವವರು ಸಲಹೆಗಾರರ ನೆರವು ಪಡೆಯುವುದು ಒಳಿತು.
ಸಲಹೆಗಾರರ ನೆರವು ಪಡೆದರೆ ಒಂದಿಷ್ಟು ಕಮಿಷನ್ ಅವರಿಗೆ ಹೋಗುತ್ತದೆ ಎನ್ನುವುದು ನಿಜ. ಆದರೆ, ಸರಿಯಾಗಿ ತಿಳಿಯದೆ ಸಿಕ್ಕ ಸಿಕ್ಕ ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿ ಕೈಸುಟ್ಟುಕೊಳ್ಳುವ ಬದಲು ಶುಲ್ಕದ ರೂಪದಲ್ಲಿ ಒಂದಷ್ಟು ಕಮಿಷನ್ ಅನ್ನು ಸಲಹೆಗಾರರಿಗೆ ನೀಡುವುದರಲ್ಲಿ ತಪ್ಪಿಲ್ಲ.
ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳುವಾಗ ಅವರು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಡೆಸುವ ಪರೀಕ್ಷೆಗಳನ್ನು ಪೂರೈಸಿದ್ದಾರಾ ಎಂಬುದನ್ನು ನೋಡಬೇಕಿದೆ. ಹೂಡಿಕೆಯಲ್ಲಿ ಅವರಿಗೆ ಸಾಕಷ್ಟು ಅನುಭವ ಇದೆಯೇ ಎಂದು ಪರಿಶೀಲಿಸಿಕೊಳ್ಳಿ. ಮಾರುಕಟ್ಟೆಯಲ್ಲಿರುವ ವಿವಿಧ ವಲಯ, ವಿವಿಧ ಸೂಚ್ಯಂಕ, ಆರ್ಥಿಕ ಬೆಳವಣಿಗೆಗಳ ಬಗ್ಗೆ ಅವರಿಗೆ ಪರಿಚಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಎಲ್ಲದಕ್ಕಿಂತಲೂ ಮಿಗಿಲಾಗಿ ನೀವು ಆಯ್ಕೆ ಮಾಡಿಕೊಳ್ಳಲು ಬಯಸಿರುವ ಸಲಹೆಗಾರ ವಿಶ್ವಾಸಾರ್ಹ ವ್ಯಕ್ತಿಯೇ ನೋಡಿ. ಮಾರುಕಟ್ಟೆ ಏರಿಳಿತದ ಸಂದರ್ಭದಲ್ಲಿ ಅವರು ನಿಮಗೆ ಸೂಕ್ತ ಮಾರ್ಗದರ್ಶನ ಮಾಡುವ ಅಧ್ಯಯನ ಮತ್ತು ಕಲಿಕೆ ಅವರಲ್ಲಿದೆಯಾ ಅಳೆದು ನೋಡಿ. ನಿಮಗೆ ಎಲ್ಲವೂ ಸರಿಯಿದೆ ಎನಿಸಿದಾಗ ಸಲಹೆಗಾರರ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗೆ ಮುಂದಾಗಿ.
ಫೆಬ್ರುವರಿ 14ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ದಾಖಲಿಸಿವೆ. 75939 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.47ರಷ್ಟು ಇಳಿಕೆ ಕಂಡಿದೆ. 22929 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 2.68ರಷ್ಟು ತಗ್ಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಕಂಪನಿಗಳ ತ್ರೈಮಾಸಿಕ ಫಲಿತಾಂಶದಲ್ಲಿ ಸಾಧಾರಣ ಬೆಳವಣಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗಿನ ವ್ಯಾಪಾರಕ್ಕೆ ಹೆಚ್ಚಿನ ಸುಂಕ ವಿಧಿಸುವುದಾಗಿ ಹೇಳಿರುವುದು ಸೇರಿ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 9.4 ಮಾಧ್ಯಮ ಶೇ 7.99 ಎನರ್ಜಿ ಶೇ 6.84 ಆಟೊ ಶೇ 5.93 ಫಾರ್ಮಾ ಶೇ 5.73 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 5.23 ಲೋಹ ಶೇ 4.64 ಮಾಹಿತಿ ತಂತ್ರಜ್ಞಾನ ಶೇ 3.75 ಎಫ್‌ಎಂಸಿಜಿ ಶೇ 3.58 ಮತ್ತು ಬ್ಯಾಂಕ್ ನಿಫ್ಟಿ ಶೇ 2.11ರಷ್ಟು ಕುಸಿದಿವೆ. ಇಳಿಕೆ–ಗಳಿಕೆ: ವಾರದ ಅವಧಿಯಲ್ಲಿ ನಿಫ್ಟಿಯಲ್ಲಿ ಐಷರ್ ಮೋಟರ್ಸ್ ಶೇ 12.45 ಹೀರೊ ಮೋಟೊಕಾರ್ಪ್ ಶೇ 9.79 ಭಾರತ್ ಎಲೆಕ್ಟ್ರಾನಿಕ್ಸ್ ಶೇ 9.64 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 8.04 ಅದಾನಿ ಎಂಟರ್‌ಪ್ರೈಸಸ್ ಶೇ 7.94 ಅಪೋಲೊ ಹಾಸ್ಪಿಟಲ್ಸ್ ಶೇ 7.57 ಪವರ್ ಗ್ರಿಡ್ ಕಾರ್ಪೊರೇಷನ್ ಶೇ 7.53 ಒಎನ್‌ಜಿಸಿ ಶೇ 7.45 ಅದಾನಿ ಪೋರ್ಟ್ಸ್ ಶೇ 7.34 ಕೋಲ್ ಇಂಡಿಯಾ ಶೇ 6.4 ಟ್ರೆಂಟ್ ಶೇ 6.2 ಮತ್ತು ಟೈಟನ್ ಕಂಪನಿ ಶೇ 6.19ರಷ್ಟು ಕುಸಿದಿವೆ. ಏರ್‌ಟೆಲ್ ಶೇ 2.35 ಬಜಾಜ್ ಫಿನ್‌ಸರ್ವ್ ಶೇ 2.3 ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 1.04 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 0.82 ಟಾಟಾ ಕನ್ಸ್ಯೂಮರ್ ಶೇ 0.3 ಮತ್ತು ಐಸಿಐಸಿಐ ಬ್ಯಾಂಕ್ ಶೇ 0.07ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ಎಬಿಬಿ ಇಂಡಿಯಾ ಪಂಜಾಬ್ ಕಮ್ಯೂನಿಕೇಷನ್ಸ್ ಎಲೆಂಟಾಸ್ ಬೆಕ್ ಇಂಡಿಯಾ ಸಿಐಇ ಆಟೊಮೋಟಿವ್ ಇಂಡಿಯಾ ಜಾನ್ ಕಾಕ್ ರಿಲ್ ಇಂಡಿಯಾ ಸೇರಿದಂತೆ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಯಮೇಲೆ ಪರಿಣಾಮ ಬೀರಲಿವೆ.
(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.