ADVERTISEMENT

‘ಎಂಎಫ್‌’ ನಿರ್ವಹಣಾ ಸಂಪತ್ತು ಮೌಲ್ಯ ಏರಿಕೆ

ಪಿಟಿಐ
Published 9 ನವೆಂಬರ್ 2018, 20:15 IST
Last Updated 9 ನವೆಂಬರ್ 2018, 20:15 IST
   

ನವದೆಹಲಿ: ಮ್ಯೂಚುವಲ್‌ ಫಂಡ್‌ಗಳು ನಿರ್ವಹಿಸುವ ಸಂಪತ್ತಿನ ಮೌಲ್ಯವು ಅಕ್ಟೋಬರ್‌ ತಿಂಗಳಲ್ಲಿ ₹ 22.23 ಲಕ್ಷ ಕೋಟಿಗೆ ತಲುಪಿದೆ.

ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಇದ್ದ ₹ 22.04 ಲಕ್ಷ ಕೋಟಿಗೆ ಹೋಲಿಸಿದರೆ, ಶೇ 1ರಷ್ಟು ಏರಿಕೆ ದಾಖಲಿಸಿದೆ. ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಐಎಲ್ಆ್ಯಂಡ್‌ಎಫ್‌ಎಸ್‌) ಸಾಲದ ಬಿಕ್ಕಟ್ಟಿಗೆ ಸಿಲುಕಿರುವುದೂ ಸೇರಿದಂತೆ ಹಣಕಾಸು ಮಾರುಕಟ್ಟೆಯಲ್ಲಿ ನಗದುತನ ಕೊರತೆ ಎದುರಾಗಿದ್ದರೂ ಮ್ಯೂಚುವಲ್‌ ಫಂಡ್‌ ಉದ್ದಿಮೆಯು ಅಂತಹ ಪ್ರತಿಕೂಲತೆಗಳನ್ನು ಸಮರ್ಥವಾಗಿ ಎದುರಿಸಿ ಸದೃಢವಾಗಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ.

ಉದ್ದಿಮೆಯಲ್ಲಿನ 42 ಸಂಸ್ಥೆಗಳ ನಿರ್ವಹಣೆಯಲ್ಲಿ ಇರುವ ಒಟ್ಟಾರೆ ಸಂಪತ್ತಿನ ಮೌಲ್ಯವು (ಎಯುಎಂ) ಹಿಂದಿನ ವರ್ಷದ ಈ ಅವಧಿಯಲ್ಲಿ ₹ 21.41 ಲಕ್ಷ ಕೋಟಿಗಳಷ್ಟಿತ್ತು.

ADVERTISEMENT

‘ಮಾರುಕಟ್ಟೆಯಲ್ಲಿನ ಇತ್ತೀಚಿನ ಪ್ರತಿಕೂಲತೆಗಳು ಮತ್ತು ಸಾಲ ಹಾಗೂ ಷೇರುಪತ್ರಗಳಲ್ಲಿನ ಏರಿಳಿತದ ಹೊರತಾಗಿಯೂ ಉದ್ದಿಮೆಯು ಸದೃಢವಾಗಿದೆ’ ಎಂದು ಭಾರತದ ಮ್ಯೂಚುವಲ್‌ ಫಂಡ್‌ ಸಂಘದ (ಎಂಎಂಎಫ್‌ಐ) ಸಿಇಒ ಎನ್‌. ಎಸ್‌. ವೆಂಕಟೇಶ್‌ ಹೇಳಿದ್ದಾರೆ.

‘ಹಿಂದಿನ ತಿಂಗಳಿಗೆ ಹೋಲಿಸಿದರೆ ರಿಟೇಲ್‌ ಹರಿವಿನಲ್ಲಿ ಆರೋಗ್ಯಕರ ಸುಧಾರಣೆ (ಶೇ 30) ಕಂಡು ಬಂದಿದೆ. ವ್ಯವಸ್ಥಿಕ ಹೂಡಿಕೆ ಯೋಜನೆಯಡಿ (ಎಸ್‌ಐಪಿ) ₹ 7,985 ಕೋಟಿ ಹೂಡಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಇದು ₹ 7,727 ಕೋಟಿಗಳಷ್ಟಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.