ADVERTISEMENT

‘ಎಂಎಫ್‌’ ಸಂಪತ್ತು ವೃದ್ಧಿ

ಹಣಕಾಸು ವರ್ಷದಲ್ಲಿ ₹ 3ಲಕ್ಷ ಕೋಟಿ ಹೆಚ್ಚಳ

ಪಿಟಿಐ
Published 24 ಡಿಸೆಂಬರ್ 2018, 18:24 IST
Last Updated 24 ಡಿಸೆಂಬರ್ 2018, 18:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುಕಟ್ಟೆ ಚಂಚಲವಾಗಿದ್ದರೂ2018ರಲ್ಲಿ ಮ್ಯೂಚುವಲ್ ಫಂಡ್ ಸಂಸ್ಥೆಗಳ ಸಂಪತ್ತು ಮೌಲ್ಯ ₹ 3 ಲಕ್ಷ ಕೋಟಿ ಹೆಚ್ಚಳಗೊಂಡಿದೆ.

ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಮೂಲಕ ಬಂಡವಾಳ ಒಳಹರಿವು ಹಾಗೂ ಚಿಲ್ಲರೆ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಸಂಪತ್ತು ಮೌಲ್ಯದಲ್ಲಿ ಹೆಚ್ಚಳವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

2014ರ ಮೇ ತಿಂಗಳ ಅಂತ್ಯಕ್ಕೆ ನಿರ್ವಹಣಾ ಸಂಪತ್ತು ₹ 10 ಲಕ್ಷ ಕೋಟಿ ಇತ್ತು. 2017ರ ಡಿಸೆಂಬರ್‌ ಅಂತ್ಯಕ್ಕೆ ₹ 21.26 ಲಕ್ಷ ಕೋಟಿಗೆ ತಲುಪಿತು. 2018ರ ನವೆಂಬರ್ ಅಂತ್ಯಕ್ಕೆ ₹ 24 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.

ADVERTISEMENT

ತ್ರೈಮಾಸಿಕದ ಅಂತ್ಯವಾಗುವ ಕಾರಣಕ್ಕಾಗಿ ಡಿಸೆಂಬರ್‌ ಅಂತ್ಯಕ್ಕೆ ನಿರ್ವಹಣಾ ಸಂಪತ್ತು ಮೌಲ್ಯದಲ್ಲಿ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ತ್ರೈಮಾಸಿಕದ ಅಂತ್ಯ ಹಾಗೂ ಮುಂಗಡ ತೆರಿಗೆ ಪಾವತಿಯನ್ನು ಗಮನದಲ್ಲಿಟ್ಟುಕೊಂಡರೆ 2018ರಲ್ಲಿ ನಿರ್ವಹಣಾ ಸಂಪತ್ತು ₹ 23 ಲಕ್ಷ ಕೋಟಿಯಿಂದ ₹ 23.5 ಲಕ್ಷ ಕೋಟಿಯ ಆಸುಪಾಸಿನಲ್ಲಿರಲಿದೆ’ ಎಂದು ಕೋಟಕ್‌ ಮಹೀಂದ್ರಾ ಸಂಪತ್ತು ನಿರ್ವಹಣಾ ಕಂಪನಿಯ ರಾಷ್ಟ್ರೀಯ ಮುಖ್ಯಸ್ಥ ಮನಿಷ್‌ ಮೆಹ್ತಾ ತಿಳಿಸಿದ್ದಾರೆ.

ಐಎಲ್‌ಆ್ಯಂಡ್‌ಎಫ್‌ಎಸ್‌ ಬಾಕಿ ಉಳಿಸಿಕೊಂಡಿರುವುದರಿಂದ ಎನ್‌ಬಿಎಫ್‌ಸಿಯಲ್ಲಿ ಉಂಟಾಗಿರುವ ನಗದು ಕೊರತೆಯು ಚಂಚಲ ವಹಿವಾಟಿಗೆ ಕಾರಣವಾಗಿತ್ತು ಎಂದು ತಜ್ಞರು ಹೇಳಿದ್ದಾರೆ.

ಹೂಡಿಕೆದಾರರಲ್ಲಿ ಜಾಗೃತಿ ಮೂಡುತ್ತಿರುವುದರಿಂದ 2019ರಲ್ಲಿ ಉದ್ಯಮದ ಬೆಳವಣಿಗೆ ವೇಗ ಹೆಚ್ಚಾಗಲಿದೆ. ಉದ್ಯಮ ಕೈಗೊಂಡಿರುವ ತಿಳಿವಳಿಕೆ ಕಾರ್ಯಕ್ರಮಗಳು ಸಹ ಪ್ರಗತಿಗೆ ನೆರವಾಗಲಿವೆ ಎಂದಿದ್ದಾರೆ.

ಕಚ್ಚಾ ತೈಲ ದರದ ಏರಿಳಿತ, ರೂಪಾಯಿ ಮೌಲ್ಯ ಇಳಿಕೆ ಹಾಗೂ ಷೇರುಪೇಟೆಯ ಚಂಚಲ ವಹಿವಾಟಿನ ಹೊರತಾಗಿಯೂ ಚಿಲ್ಲರೆ ಹೂಡಿಕೆದಾರರ ‘ಸಿಪ್‌’ ಹೂಡಿಕೆಯಲ್ಲಿ ಏರಿಕೆಯಾಗಿದೆ.

‘ರಿಯಲ್ ಎಸ್ಟೇಟ್‌, ಚಿನ್ನದಂತಹ ಭೌತಿಕ ರೂಪದ ಹೂಡಿಕೆಗಳಿಂದ ಆರ್ಥಿಕ ಸಂಪತ್ತು ಸೃಷ್ಟಿಸುವ ಹೂಡಿಕೆ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಉದ್ಯಮದಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಿದೆ’ ಎಂದು ಕ್ವಾಂಟಂ ಅಸೆಟ್ ಮ್ಯಾನೇಜ್‌ಮೆಂಟ್‌ ಕಂಪನಿಯ ಸಿಇಒ ಜಿಮ್ಮಿ ಪಟೇಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.