ADVERTISEMENT

ಮ್ಯೂಚುವಲ್ ಫಂಡ್‌: ತಗ್ಗಿದ ಉತ್ಸಾಹ

2023ರಲ್ಲಿ ಉದ್ಯಮದ ಉತ್ತಮ ಬೆಳವಣಿಗೆ: ತಜ್ಞರ ನಿರೀಕ್ಷೆ

ಪಿಟಿಐ
Published 25 ಡಿಸೆಂಬರ್ 2022, 12:22 IST
Last Updated 25 ಡಿಸೆಂಬರ್ 2022, 12:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಮ್ಯೂಚುವಲ್ ಫಂಡ್‌ ಉದ್ಯಮವು 2021ರಲ್ಲಿ ಕಂಡಿದ್ದಂತಹ ಬೆಳವಣಿಗೆಯ ವೇಗವನ್ನು 2022ರಲ್ಲಿ ಕಾಯ್ದುಕೊಳ್ಳಲು ವಿಫಲವಾಗಿದೆ ಎನ್ನುವುದನ್ನು ಉದ್ಯಮದ ಅಂಕಿ–ಅಂಶಗಳು ಸೂಚಿಸುತ್ತಿವೆ.

ಮಾರುಕಟ್ಟೆಯು ಹೆಚ್ಚು ಅಸ್ಥಿರವಾಗಿದ್ದ ಕಾರಣದಿಂದಾಗಿ 2022ರಲ್ಲಿ ನಿರ್ವಹಣಾ ಸಂಪತ್ತು ಮೌಲ್ಯ, ಹೂಡಿಕೆದಾರರ ಸಂಖ್ಯೆ ಹಾಗೂ ಹೂಡಿಕೆಯ ವಿಷಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉದ್ಯಮವು ನಿಧಾನಗತಿಯ ಬೆಳವಣಿಗೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮ್ಯೂಚುವಲ್ ಫಂಡ್‌ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು 2022ರಲ್ಲಿ ಈವರೆಗೆ ಶೇ 7ರಷ್ಟು (₹2.65 ಲಕ್ಷ ಕೋಟಿ) ಹೆಚ್ಚಾಗಿದೆ. 2021ರಲ್ಲಿ ಸಂಪತ್ತು ಮೌಲ್ಯವು ಶೇ 22ರಷ್ಟು ಹೆಚ್ಚಾಗಿತ್ತು (₹7 ಲಕ್ಷ ಕೋಟಿ) ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.

ADVERTISEMENT

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. 2021ರಲ್ಲಿ ₹96,700 ಕೋಟಿ ಹೂಡಿಕೆ ಆಗಿತ್ತು. 2022ರಲ್ಲಿ ₹1.57 ಲಕ್ಷ ಕೋಟಿಗೆ ಏರಿಕೆ ಆಗಿದೆ.

2023ರಲ್ಲಿ ಉತ್ತಮ ಬೆಳವಣಿಗೆ: ಉದ್ಯಮವು 2023ರಲ್ಲಿ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ನಿಯೋ ಕಂಪನಿಯ ಯೋಜನಾ ಮುಖ್ಯಸ್ಥ ಸ್ವಪ್ನಿಲ್‌ ಭಾಸ್ಕರ್‌ ಹೇಳಿದ್ದಾರೆ. ಯುವ ಸಮೂಹದ ಭಾಗವಹಿಸುವಿಕೆ ಮತ್ತು ಆರ್ಥಿಕ ಪ್ರಗತಿಯಿಂದಾಗಿ ಉದ್ಯಮದ ಬೆಳವಣಿಗೆಯು ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ವರ್ಷ ಉದ್ಯಮವು ಶೇ 16 –17ರ ಆಸುಪಾಸಿನಲ್ಲಿ ಬೆಳವಣಿಗೆ ಕಾಣಲಿದೆ. ದೇಶದ ಆರ್ಥಿಕ ಬೆಳವಣಿಗೆ ಮತ್ತು ಮುಂಬರುವ ಬಜೆಟ್‌ನ ನಿರ್ಧಾರಗಳು ಈ ಪ್ರಮಾಣದ ಬೆಳವಣಿಗೆಗೆ ಬೆಂಬಲ ನೀಡಲಿವೆ ಎಂದು ಒಕ್ಕೂಟದ ಸಿಇಒ ಎನ್‌.ಎಸ್. ವೆಂಕಟೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.