ADVERTISEMENT

₹ 1 ಲಕ್ಷ ಕೋಟಿ ಲಾಭದತ್ತ ರಾಷ್ಟ್ರೀಕೃತ ಬ್ಯಾಂಕ್‌ಗಳು

ಪಿಟಿಐ
Published 4 ಜನವರಿ 2023, 19:51 IST
Last Updated 4 ಜನವರಿ 2023, 19:51 IST
Bank Icon
Bank Icon   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 2017ರಲ್ಲಿ ಒಟ್ಟು ₹ 85,390 ಕೋಟಿ ನಷ್ಟ ಕಂಡಿದ್ದವು. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅವು ಒಟ್ಟು ₹ 1 ಲಕ್ಷ ಕೋಟಿ ಲಾಭ ಗಳಿಸುವ ನಿರೀಕ್ಷೆ ಇದೆ.

21 ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ 11 ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಒಂದು ಸಂದರ್ಭದಲ್ಲಿ ಆ ಬ್ಯಾಂಕ್‌ಗಳ ಮೇಲೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತ್ತು. ಹಲವು ಬ್ಯಾಂಕ್‌ಗಳ ಷೇರು ಮೌಲ್ಯವು ತಳಕಚ್ಚಿತ್ತು.

2015–16ರಿಂದ 2019–20ರವರೆಗಿನ ಅವಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಒಟ್ಟು ₹ 2.07 ಲಕ್ಷ ಕೋಟಿ ನಷ್ಟ ಕಂಡವು. ಆದರೆ ಈಗ ಅವು ಲಾಭದ ಹಳಿಗೆ ಬಂದಿವೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಹಿಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಜೊತೆಗೂಡಿ ಕೈಗೊಂಡ ಸುಧಾರಣಾ ಕ್ರಮಗಳು ಇದಕ್ಕೆ ಕಾರಣ.

ಕಳೆದ ಐದು ಹಣಕಾಸು ವರ್ಷಗಳಲ್ಲಿ ಕೇಂದ್ರವು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ₹3.10 ಲಕ್ಷ ಕೋಟಿ ಬಂಡವಾಳ ನೆರವು ನೀಡಿದೆ.

ಬಂಡವಾಳದ ನೆರವು ಹಾಗೂ ಕೇಂದ್ರ ಹಣಕಾಸು ಸೇವೆಗಳ ಇಲಾಖೆಯಿಂದ ಸಿಕ್ಕ ಒತ್ತಾಸೆಯ ಕಾರಣದಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಬಾಕಿ ಇರಿಸಿಕೊಂಡಿದ್ದವರ ವಿರುದ್ಧ ಬಿಗಿ ನಿಲುವು ಅನುಸರಿಸಿದವು. ದೊಡ್ಡ ಪ್ರಮಾಣದ ಸಾಲ ತೀರಿಸದೆ ಇದ್ದ ಭೂಷಣ್‌ ಸ್ಟೀಲ್, ಜೆಟ್ ಏರ್‌ವೇಸ್‌, ಎಸ್ಸಾರ್ ಸ್ಟೀಲ್‌, ರೊಟೊಮ್ಯಾಕ್‌ನಂತಹ ಕಂಪನಿಗಳು, ನೀರವ್‌ ಮೋದಿಯಂತಹ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾದವು. ಈ ಎಲ್ಲ ಕ್ರಮಗಳ ಪರಿಣಾಮವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭ ಕಾಣುವಂತಾಯಿತು. ಹಿಂದಿನ ಹಣಕಾಸು ವರ್ಷದಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಷೇರುದಾರರಿಗೆ ಡಿವಿಡೆಂಡ್ ಕೂಡ ನೀಡಿವೆ.

‘ಸೋರಿಕೆಗಳನ್ನು ತಡೆಯಲಾಗುತ್ತಿದೆ. ಬ್ಯಾಂಕ್‌ಗಳ ಆಸ್ತಿ ಗುಣಮಟ್ಟ ಸುಧಾರಿಸುತ್ತಿದೆ. ಈಗ ಬಡ್ಡಿ ದರ ಹೆಚ್ಚಾಗುತ್ತಿರುವ ಕಾರಣ ಬ್ಯಾಂಕ್‌ಗಳ ಲಾಭದ ಪ್ರಮಾಣವೂ ಹೆಚ್ಚಾಗಲಿದೆ. ಲಾಭದ ದೃಷ್ಟಿಯಿಂದ ಹೇಳುವುದಾದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಈಗ ಸುವರ್ಣ ಕಾಲಘಟ್ಟದಲ್ಲಿ ಇವೆ’ ಎಂದು ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸ್ವರೂಪ್ ಕುಮಾರ್ ಸಹಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.