ADVERTISEMENT

ಸಿಸಿಐ ದಂಡ ಪ್ರಶ್ನಿಸಿ ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ ಮೆಟಾ

ಪಿಟಿಐ
Published 16 ಜನವರಿ 2025, 13:54 IST
Last Updated 16 ಜನವರಿ 2025, 13:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಾಟ್ಸ್‌ಆ್ಯಪ್‌ನಿಂದ ಗೋಪ್ಯತೆ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ವಿಧಿಸಿರುವ ₹213 ಕೋಟಿ ದಂಡ ಪ್ರಶ್ನಿಸಿ, ಮೆಟಾ ಕಂಪನಿಯು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಮೆಟ್ಟಿಲೇರಿಸಿದೆ.

ದಂಡ ಪ್ರಕರಣ ಕುರಿತು ಸಿಸಿಐ ಮತ್ತು ಮೆಟಾ ಮಂಡಿಸಿದ ವಾದ ಆಲಿಸಿದ ಮಂಡಳಿಯ ವಿಭಾಗೀಯ ನ್ಯಾಯಪೀಠವು, ಎರಡೂ ಕಡೆಯಿಂದ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸಲು ಸ್ವೀಕರಿಸಿದೆ.

ಮೆಟಾ ಮತ್ತು ಸಿಸಿಐ ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಲಾಗಿದೆ ಎಂದು ನ್ಯಾಯಪೀಠ ಅಧ್ಯಕ್ಷರಾದ ನ್ಯಾಯಮೂರ್ತಿ ಅಶೋಕ್‌ ಭೂಷಣ್ ತಿಳಿಸಿದ್ದಾರೆ.

ADVERTISEMENT

ಆದರೆ, ಭಾರತೀಯ ಸ್ಪರ್ಧಾತ್ಮಕ ಆಯೋಗ ನೀಡಿರುವ ದಂಡದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿದ ವಾಟ್ಸ್‌ಆ್ಯಪ್‌ ಮತ್ತು ಮೆಟಾ ಮನವಿಯನ್ನು ನ್ಯಾಯಮಂಡಳಿಯು ಪುರಸ್ಕರಿಸಲಿಲ್ಲ. ಮುಂದಿನ ವಾರ ನಡೆಯಲಿರುವ ವಿಚಾರಣೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.

ಪ್ರಕರಣ ಏನು?:

ವಾಟ್ಸ್‌ಆ್ಯಪ್‌ನಲ್ಲಿ ಸಂಗ್ರಹಿಸುವ ಬಳಕೆದಾರರ ಮಾಹಿತಿಯನ್ನು ಜಾಹೀರಾತು ಉದ್ದೇಶಗಳಿಗೆ ಮೆಟಾ ಕಂಪನಿಯು ತನ್ನ ಇತರೆ ಅಪ್ಲಿಕೇಷನ್‌ಗಳಲ್ಲಿ ಬಳಸದಂತೆ ಆಯೋಗವು, ನಿರ್ಬಂಧ ವಿಧಿಸಿದೆ.

ಆದರೆ, 2021ರಲ್ಲಿ ವಾಟ್ಸ್‌ಆ್ಯಪ್‌ನ ನವೀಕೃತ ನೀತಿ ಅನ್ವಯ ಎಲ್ಲಾ ಬಳಕೆದಾರರು ಮೆಟಾದೊಂದಿಗೆ ದತ್ತಾಂಶ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಪರ್ಧಾತ್ಮಕತೆಗೆ ವಿರುದ್ಧವಾದ ನಿಯಮಗಳನ್ನು ಅನುಸರಿಸಬಾರದು ಎಂದು ಮೆಟಾಗೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.