ADVERTISEMENT

ಜೀ ವಿರುದ್ಧದ ದಿವಾಳಿ ಪ್ರಕ್ರಿಯೆಗೆ ಎನ್‌ಸಿಎಲ್‌ಎಟಿ ತಡೆ

ಪಿಟಿಐ
Published 24 ಫೆಬ್ರುವರಿ 2023, 11:38 IST
Last Updated 24 ಫೆಬ್ರುವರಿ 2023, 11:38 IST

ನವದೆಹಲಿ: ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ವಿರುದ್ಧದ ದಿವಾಳಿ ಪ್ರಕ್ರಿಯೆಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಶುಕ್ರವಾರ ತಡೆಯಾಜ್ಞೆ ನೀಡಿದೆ.

ಇಂಡಸ್‌ಇಂಡ್‌ ಬ್ಯಾಂಕ್‌ ಮನವಿಯಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಪೀಠವು ದಿವಾಳಿ ಪ್ರಕ್ರಿಯೆ ಜಾರಿಗೊಳಿಸಲು ಒಪ್ಪಿಗೆ ನೀಡಿತ್ತು. ಅಲ್ಲದೆ, ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸಲು ಸಂಜೀವ್‌ ಕುಮಾರ್‌ ಜಲನ್‌ ಅವರನ್ನು ನೇಮಕ ಮಾಡಿತ್ತು. ಇದಕ್ಕೆ ತಡೆ ನೀಡುವಂತೆ ಕೋರಿ ಜೀ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪುನಿತ್ ಗೋಯೆಂಕಾ ಅವರು ಎನ್‌ಸಿಎಲ್‌ಎಟಿಗೆ ಮನವಿ ಮಾಡಿದ್ದರು.

ಈ ಸಂಬಂಧ ಮೇಲ್ಮನವಿ ಪ್ರಾಧಿಕಾರವು ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ದಿವಾಳಿ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುವ ಅಧಿಕಾರಿಗೆ ನೋಟಿಸ್ ನೀಡಿದ್ದು, ಎರಡು ವಾರಗಳ ಒಳಗಾಗಿ ಪ್ರಕ್ರಿಯೆ ನೀಡುವಂತೆ ಸೂಚನೆ ನೀಡಿದೆ. ಎರಡೂ ಪಕ್ಷದವರ ಪ್ರಕ್ರಿಯೆಯ ಕುರಿತು ಸಮಗ್ರವಾದ ವಿಚಾರಣೆ ನಡೆಸುವ ಅಗತ್ಯ ಇದೆ ಎಂದು ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.

ADVERTISEMENT

ಮಾರ್ಚ್‌ 29ರಂದು ಅಂತಿಮ ವಿಚಾರಣೆ ನಡೆಸಲಾಗುವುದು. ಇದೇ ವೇಳೆ, ಫೆಬ್ರುವರಿ 22ರಂದು ಎನ್‌ಸಿಎಲ್‌ಟಿ ನೀಡಿರುವ ಆದೇಶಕ್ಕೆ ತಡೆ ಇರಲಿದೆ ಎಂದು ಎನ್‌ಸಿಎಲ್‌ಎಟಿ ತಿಳಿಸಿದೆ.

ಮೇಲ್ಮನವಿ ಪ್ರಾಧಿಕಾರವು ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಮ್ಮೆಲ್ಲಾ ಷೇರುದಾರರ ಹಿತರಕ್ಷಣೆ ಮಾಡಲು ಬದ್ಧರಾಗಿದ್ದೇವೆ ಎಂದು ಗೋಯೆಂಕಾ ಪ್ರತಿಕ್ರಿಯೆ ನೀಡಿದ್ದಾರೆ.

ಎಸ್ಸೆಲ್‌ ಸಮೂಹದ ಸಿಟಿ ನೆಟ್‌ವರ್ಕ್ಸ್‌ ಕಂಪನಿಯು ಇಂಡಸ್‌ಇಂಡ್‌ ಬ್ಯಾಂಕ್‌ಗೆ ₹89 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ. ಈ ಸಾಲಕ್ಕೆ ಜೀ ಕಂಪನಿಯು ಜಾಮೀನುದಾರ ಆಗಿದೆ. ಆದರೆ, ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಖಾತರಿ ನೀಡಿಲ್ಲ. ಒಂದೊಮ್ಮೆ ಸಿಟಿ ನೆಟ್‌ವರ್ಕ್ಸ್‌ ಒಂದು ಕಂತಿನ ಬಡ್ಡಿಯನ್ನು ಪಾವತಿಸಲು ವಿಫಲವಾದರೆ ಮಾತ್ರ ಅದಕ್ಕೆ ಹೊಣೆಗಾರ ಆಗಲು ಒಪ್ಪಿಗೆ ನೀಡಿರುವುದಾಗಿ ಜೀ ಹೇಳಿದೆ.

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾದೊಂದಿಗೆ ವಿಲೀನ ಆಗುತ್ತಿರುವ ಜೀ ಕಂಪನಿಗೆ ಮೇಲ್ಮನವಿ ಪ್ರಾಧಿಕಾರದ ಆದೇಶವು ತಾತ್ಕಾಲಿಕವಾಗಿ ನೆಮ್ಮದಿ ನೀಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.