ADVERTISEMENT

ನೇರ ತೆರಿಗೆ ಸಂಗ್ರಹ ಶೇ 17ರಷ್ಟು ಹೆಚ್ಚಳ

ಆದಾಯ ತೆರಿಗೆ, ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿ ಏರಿಕೆ

ಪಿಟಿಐ
Published 11 ಮಾರ್ಚ್ 2023, 10:21 IST
Last Updated 11 ಮಾರ್ಚ್ 2023, 10:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ನೇರ ತೆರಿಗೆಯ ನಿವ್ವಳ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್‌ 10ರವರೆಗೆ ₹13.73 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 16.78ರಷ್ಟು ಹೆಚ್ಚಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಶನಿವಾರ ತಿಳಿಸಿದೆ.

2022–23ನೇ ಹಣಕಾಸು ವರ್ಷಕ್ಕೆ ಸರ್ಕಾರ ಮಾಡಿರುವ ಪರಿಷ್ಕೃತ ಅಂದಾಜಿನ ಶೇ 83ರಷ್ಟು ಆಗಿದೆ. ಪರಿಷ್ಕೃತ ಅಂದಾಜಿನ ಪ್ರಕಾರ, ಪ್ರಸಕ್ತ ಹಣಕಾಸು ವರ್ಷಕ್ಕೆ ನೇರ ತೆರಿಗೆ ಮೂಲಕ ₹16.50 ಲಕ್ಷ ಕೋಟಿ ವರಮಾನ ಸಂಗ್ರಹ ಆಗಲಿದೆ. ಇದು ಬಜೆಟ್‌ ಅಂದಾಜಿಗಿಂತಲೂ (₹14.20 ಲಕ್ಷ ಕೋಟಿ) ಹೆಚ್ಚಿನದ್ದಾಗಿದೆ.

ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್‌ ತೆರಿಗೆಗಳ ಸಂಗ್ರಹ ಹೆಚ್ಚಾಗಿರುವುದರಿಂದ ನೇರ ತೆರಿಗೆಯಲ್ಲಿ ಈ ಪ್ರಮಾಣದ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದೆ.

ADVERTISEMENT

ನೇರ ತೆರಿಗೆಯ ಸರಾಸರಿ ಸಂಗ್ರಹವು ಶೇ 22.58ರಷ್ಟು ಹೆಚ್ಚಾಗಿ ₹16.68 ಲಕ್ಷ ಕೋಟಿಗೆ ತಲುಪಿದೆ. 2022ರ ಏಪ್ರಿಲ್ 1 ರಿಂದ 2023ರ ಮಾರ್ಚ್‌ 10ರವರೆಗಿನ ಅವಧಿಯಲ್ಲಿ ₹2.95 ಲಕ್ಷ ಕೋಟಿ ತೆರಿಗೆ ಮರುಪಾವತಿ ಮಾಡಲಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಮರುಪಾವತಿಯು ಶೇ 59.44ರಷ್ಟು ಹೆಚ್ಚಾಗಿದೆ.

ಮರುಪಾವತಿ ಹೊಂದಾಣಿಕೆಯ ಬಳಿಕ ಕಾರ್ಪೊರೇಟ್ ಆದಾಯ ತೆರಿಗೆಯ ನಿವ್ವಳ ಸಂಗ್ರಹವು ಶೇ 13.62 ಮತ್ತು ವೈಯಕ್ತಿಕ ಆದಾಯ ತೆರಿಗೆಯ ನಿವ್ವಳ ಸಂಗ್ರಹವು ಶೇ 20.06ರಷ್ಟು ಆಗಿದೆ ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.