ADVERTISEMENT

ಕೈಗಾರಿಕಾಸ್ನೇಹಿ ಆಸ್ತಿ ತೆರಿಗೆ ಜಾರಿ– ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:07 IST
Last Updated 22 ಜುಲೈ 2021, 20:07 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾಸ್ನೇಹಿ ತೆರಿಗೆ ಸುಧಾರಣೆಗೆ ಮುಂದಾಗಿದ್ದು, ಈ ಬಗ್ಗೆ ಶೀಘ್ರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಸೂಚಿಸಿದರು.

ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ನಗರಾಭಿವೃದ್ದಿ ಸಚಿವ ಬಿ.ಎ. ಬಸವರಾಜ್‌, ಮೂರೂ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಗುರುವಾರ ಅವರು ಸಭೆ ನಡೆಸಿದರು. ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಸಭೆಗೆ ತಿಳಿಸಿದರು.

‘ಕೈಗಾರಿಕೆಗಳಿಗೆ ವಿಧಿಸುವ ತೆರಿಗೆ ಬಹಳ ಹೆಚ್ಚಾಗಿವೆ. ಖಾಲಿ ಇರುವ ಜಾಗದ ಮೇಲೂ ಬಹಳಷ್ಟು ತೆರಿಗೆ ಹಾಕಲಾಗುತ್ತಿದೆ. ರಾಜ್ಯದಾದ್ಯಂತ ಪಾರದರ್ಶಕ ಹಾಗೂ ಒಂದೇ ರೀತಿಯ ತೆರಿಗೆ ಪದ್ದತಿ ಅಳಡಿಸಿಕೊಳ್ಳುವುದು ಬಹಳ ಅವಶ್ಯಕ. ಹೀಗಾಗಿ, ಕೈಗಾರಿಕಾಸ್ನೇಹಿ ತೆರಿಗೆ ಪದ್ದತಿಯ ಅನುಷ್ಠಾನಕ್ಕೆ ಅಗತ್ಯವಿರುವ ಸುಧಾರಣೆಗಳನ್ನು ಶೀಘ್ರ ಕೈಗೊಳ್ಳಬೇಕು’ ಎಂದು ಅದಿಕಾರಿಗಳಿಗೆ ಶೆಟ್ಟರ್‌ ಹೇಳಿದರು.

ADVERTISEMENT

‘ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರ ಸಭೆಯನ್ನು ಮುಂದಿನ ವಾರ ಆಯೋಜಿಸಬೇಕು. ಆ ಸಭೆಯಲ್ಲಿ ರಾಜ್ಯದಾದ್ಯಂತ ಕೈಗಾರಿಕೆಗಳಿಂದ ಬಾಕಿ ಇರುವ ತೆರಿಗೆಯ ಬಗ್ಗೆ ಮಾಹಿತಿ ಪಡೆದು, ಒಂದು ಬಾರಿಯ ವಿಶೇಷ ಯೋಜನೆ ಘೋಷಿಸುವಂಥ ನಿರ್ಧಾರ ತೆಗೆದುಕೊಳ್ಳಬೇಕು’ ಎಂದೂ ಅವರು ಸೂಚಿಸಿದರು.

‘ಹಳೆಯ ತೆರಿಗೆಯನ್ನು ಒಂದೇ ಬಾರಿಗೆ ಪಾವತಿಸುವ (ಒನ್‌ ಟೈಂ ಸೆಟಲ್‌ಮೆಂಟ್‌) ಯೋಜನೆ ಹಾಗೂ ತೆರಿಗೆಯಲ್ಲಿ ರಿಯಾಯಿತಿ ನೀಡುವ ಬಗ್ಗೆ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ನಗರಾಭಿವೃದ್ದಿ ಸಚಿವ ಬಿ.ಎ. ಬಸವರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.