ADVERTISEMENT

ಲಾಟರಿ ಮೇಲೆ ನಿಷೇಧ ಇಲ್ಲ

ಸಂಸತ್‌ನಲ್ಲಿ ಆರ್ಥಿಕ ವಿಚಾರ

ಪಿಟಿಐ
Published 3 ಜುಲೈ 2019, 17:32 IST
Last Updated 3 ಜುಲೈ 2019, 17:32 IST
   

ನವದೆಹಲಿ: ದೇಶದಾದ್ಯಂತ ಲಾಟರಿ ಮೇಲೆ ನಿಷೇಧ ವಿಧಿಸುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇಲ್ಲ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

‘ಸದ್ಯಕ್ಕೆ ಕೇರಳ, ಗೋವಾ, ಮಹಾರಾಷ್ಟ್ರ, ಸಿಕ್ಕಿಂ, ಪಶ್ಚಿಮ ಬಂಗಾಳ ಸೇರಿದಂತೆ 10 ರಾಜ್ಯಗಳಲ್ಲಿ ಲಾಟರಿಗೆ ಅವಕಾಶ ನೀಡಲಾಗಿದೆ. ಲಾಟರಿಗಳ ಮೇಲೆ ನಿಷೇಧ ವಿಧಿಸುವ ಆಲೋಚನೆ ಪರಿಶೀಲನೆಯಲ್ಲಿ ಇಲ್ಲ’ ಎಂದು ಗೃಹ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

‘ಲಾಟರಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಲಾಟರಿಗಳ ಪರಿಣಾಮಕಾರಿ ನಿಯಂತ್ರಣ ಉದ್ದೇಶಕ್ಕೆ ಸರ್ಕಾರ ‘ಲಾಟರಿ (ನಿಯಂತ್ರಣ) ನಿಯಮ 2010’ ಜಾರಿಗೆ ತಂದಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಾಟರಿ ಟಿಕೆಟ್‌ ಮಾರಾಟಕ್ಕೆ ಅವಕಾಶ ನೀಡಲಾಗಿಲ್ಲ.

ADVERTISEMENT

‘ಲಾಟರಿ ವಿತರಕರು ಮತ್ತು ಮಾರಾಟಗಾರರಿಂದ 2016–17ರಲ್ಲಿ ₹ 260 ಕೋಟಿ ಮೊತ್ತದ ಸೇವಾ ತೆರಿಗೆ ವಸೂಲಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಟೆಲಿವಿಷನ್‌ ಆಮದು

2018–19ರಲ್ಲಿ ₹ 7,224 ಕೋಟಿ ಮೊತ್ತದ ಟೆಲಿವಿಷನ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಅರ್ಧದಷ್ಟನ್ನು ಚೀನಾದಿಂದ ತರಿಸಲಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

‘ಟೆಲಿವಿಷನ್‌ಗಳ ದೇಶಿ ತಯಾರಿಕೆಗೆ ಸರ್ಕಾರ ಹಲವಾರು ರಿಯಾಯ್ತಿಗಳನ್ನು ನೀಡುತ್ತಿದೆ. ಇದರಿಂದಾಗಿ ಬೇಡಿಕೆಯ ಶೇ 80ರಷ್ಟು ಸ್ಥಳೀಯವಾಗಿಯೇ ಪೂರೈಕೆಯಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಅಂತರ್ಜಾಲ ತಾಣಕ್ಕೆ ಕನ್ನ

ಈ ವರ್ಷದ ಮೇ ತಿಂಗಳವರೆಗೆ ಕೇಂದ್ರ ಸಚಿವಾಲಯ, ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸೇರಿದ 25 ಅಂತರ್ಜಾಲ ತಾಣಗಳಿಗೆ ಕನ್ನ ಹಾಕಲಾಗಿದೆ. ಈ ಅವಧಿಯಲ್ಲಿ ದೇಶದಲ್ಲಿ ಒಟ್ಟಾರೆ 10,900 ಅಂತರ್ಜಾಲ ತಾಣಗಳಿಗೆ ಕನ್ನ ಹಾಕಲಾಗಿತ್ತು. ಸೈಬರ್‌ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.