ADVERTISEMENT

ಎಲ್‌ಪಿಜಿ: ನಗದು ನೇರ ವರ್ಗಾವಣೆ ರದ್ದು ಇಲ್ಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 20:22 IST
Last Updated 5 ಡಿಸೆಂಬರ್ 2018, 20:22 IST

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್‌ಗೆ (ಎಲ್‌ಪಿಜಿ) ನೀಡಲಾಗುವ ಸಬ್ಸಿಡಿಯ ನಗದು ನೇರ ವರ್ಗಾವಣೆ (ಡಿಬಿಟಿ) ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಎಲ್‌ಪಿಜಿ ಸಬ್ಸಿಡಿ ಹಣವನ್ನು ಸದ್ಯಕ್ಕೆ ಬಳಕೆದಾರರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತಿದೆ. ಈ ಪದ್ಧತಿ ಬದಲಿಸಲು ಸರ್ಕಾರ ಚಿಂತಿಸುತ್ತಿದೆ. ಈ ಹಿಂದೆ ಜಾರಿಯಲ್ಲಿ ಇದ್ದಂತೆ, ಗ್ರಾಹಕರಿಗೆ ಸಬ್ಸಿಡಿ ದರದಲ್ಲಿಯೇ ಎಲ್‌ಪಿಜಿ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಸಬ್ಸಿಡಿ ಮೊತ್ತವನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಿಗೆ ಪಾವತಿಸುವ ಆಲೋಚನೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿ ಹಾಕಿದೆ.

ಶೀಘ್ರವೇ ಪೂರ್ವ ಮುದ್ರಿತ ‘ಐಟಿಆರ್‌’

ADVERTISEMENT

ನವದೆಹಲಿ (ಪಿಟಿಐ): ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆ (ಐಟಿ ರಿಟರ್ನ್ಸ್‌) ಪ್ರಕ್ರಿಯೆಯನ್ನು ಸುಲಭಗೊಳಿಸಲು ತೆರಿಗೆ ಪಾವತಿದಾರರಿಗೆ ಪೂರ್ವ ಮುದ್ರಿತ ಮಾಹಿತಿಯ ಅರ್ಜಿಗಳನ್ನು ವಿತರಿಸಲು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಉದ್ದೇಶಿಸಿದೆ.

‘ವೇತನದಾರರಿಂದ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಮಾಡಿಕೊಳ್ಳುವ ಕಂಪನಿಗಳು ಆ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುತ್ತವೆ. ಇಲಾಖೆಯ ಬಳಿ ಇರುವ ಈ ‘ಟಿಡಿಎಸ್‌’ ಮಾಹಿತಿಯನ್ನು ತೆರಿಗೆದಾರರ ಅರ್ಜಿಗಳಲ್ಲಿ
ಮೊದಲೇ ಭರ್ತಿ ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆ ಕಾರ್ಯ
ಪ್ರವೃತ್ತವಾಗಿದೆ. ಇದರಿಂದ ಐ.ಟಿ ರಿಟರ್ನ್ಸ್‌ ಸಲ್ಲಿಕೆ ಸುಲಭವಾಗಲಿದೆ’ ಎಂದು ‘ಸಿಬಿಡಿಟಿ’ ಅಧ್ಯಕ್ಷ ಸುಶೀಲ್‌ ಚಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.