ಬೆಂಗಳೂರು: ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನಿರಂತರವಾಗಿ ಅಡುಗೆ ಅನಿಲ ಸಿಲಿಂಡರ್ ಪೂರೈಸಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ತಿಳಿಸಿವೆ.
ದಕ್ಷಿಣ ಭಾಗದ ಎಲ್‌ಪಿಜಿ ಸಾರಿಗೆ ಮಾಲೀಕರ ಸಂಘದೊಟ್ಟಿಗೆ ಸಂಯೋಜಿತಗೊಂಡಿರುವ ಸಾಗಣೆದಾರರು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಪೂರೈಕೆಗೆ ತೊಂದರೆಯಾಗುವುದಿಲ್ಲ. ಕಂಪನಿಗಳಿಗೆ ಸೇರಿದ ಸ್ಥಾವರಗಳಲ್ಲಿ ಎಲ್‌ಪಿಜಿ ದಾಸ್ತಾನು ಹೆಚ್ಚಿದೆ. ವಿತರಕರು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿವೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಪಾರದರ್ಶಕವಾಗಿ ಟೆಂಡರ್ ಕರಾರು ಸಿದ್ಧಪಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಇದನ್ನು ಜಾರಿಗೆ ತರಲಾಗಿದೆ. ಹೊಸ ಟೆಂಡರ್ ನಿಯಮಗಳು ಎಲ್‌ಪಿಜಿ ಸಾಗಣೆಯ ಸುರಕ್ಷತೆ ಮತ್ತು ದಕ್ಷತೆ ಹೆಚ್ಚಿಸುತ್ತವೆ ಎಂದು ಹೇಳಿವೆ.
ಈ ಪ್ರಯತ್ನದ ಹೊರತಾಗಿಯೂ ಸಾಗಣೆದಾರರ ಒಂದು ವಿಭಾಗವು ಮುಷ್ಕರಕ್ಕೆ ಕರೆ ನೀಡಿದೆ. ಪ್ರಾಥಮಿಕವಾಗಿ ಸುರಕ್ಷತಾ ಕ್ರಮಗಳ ಉಲ್ಲಂಘನೆ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದ ದಂಡದ ಷರತ್ತು ಹಿಂಪಡೆಯುವಂತೆ ಒತ್ತಾಯಿಸುತ್ತಿದೆ ಎಂದು ತಿಳಿಸಿವೆ.
ಮುಷ್ಕರದಿಂದ ಸಾರ್ವಜನಿಕರಿಗೆ ಅನನುಕೂಲವಾಗಲಿದೆ. ಹಾಗಾಗಿ, ಮುಷ್ಕರ ಹಿಂಪಡೆಯಬೇಕು ಎಂದು ದಕ್ಷಿಣ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.