ADVERTISEMENT

ಯೆಸ್‌ ಬ್ಯಾಂಕ್‌ | ನಗದು ಸಮಸ್ಯೆ ಇಲ್ಲ: ನಿಯೋಜಿತ ಸಿಇಒ ಭರವಸೆ

ನಿಯೋಜಿತ ಸಿಇಒ ಪ್ರಶಾಂತ್ ಕುಮಾರ್‌ ಭರವಸೆ

ಪಿಟಿಐ
Published 17 ಮಾರ್ಚ್ 2020, 17:19 IST
Last Updated 17 ಮಾರ್ಚ್ 2020, 17:19 IST
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್   

ಮುಂಬೈ: ‘ಯೆಸ್‌ ಬ್ಯಾಂಕ್‌ನಲ್ಲಿ ನಗದು ಸಮಸ್ಯೆ ಇಲ್ಲ. ಗ್ರಾಹಕರ ಠೇವಣಿಗಳು ಸುರಕ್ಷಿತವಾಗಿವೆ’ ಎಂದು ಬ್ಯಾಂಕ್‌ನನಿಯೋಜಿತ ಸಿಇಒ ಪ್ರಶಾಂತ್‌ ಕುಮಾರ್‌ ಹೇಳಿದ್ದಾರೆ.

‘ಬುಧವಾರ ಸಂಜೆ 6 ಗಂಟೆಯಿಂದ ಬ್ಯಾಂಕ್‌ನ ಕಾರ್ಯ ನಿರ್ವಹಣೆಯು ಸಹಜ ಸ್ಥಿತಿಗೆ ಬರಲಿದೆ’ ಎಂದೂ ತಿಳಿಸಿದ್ದಾರೆ.

‘ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬ್ಯಾಂಕ್‌ನ ಎಟಿಎಂಗಳಲ್ಲಿ ಸಾಕಷ್ಟು ನಗದು ಲಭ್ಯವಿದೆ. ಎಲ್ಲಾ ಶಾಖೆಗಳಿಗೂ ಸಾಕಷ್ಟು ನಗದು ಪೂರೈಕೆ ಮಾಡಲಾಗಿದೆ. ಹೀಗಾಗಿ ಯೆಸ್‌ ಬ್ಯಾಂಕ್‌ ಕಡೆಯಿಂದ ಯಾವುದೇ ರೀತಿಯ ನಗದು ಸಮಸ್ಯೆ ಇಲ್ಲ. ಕಾನೂನು ಪ್ರಕ್ರಿಯೆ ಅಥವಾ ಕೋರ್ಟ್‌ನಲ್ಲಿ ಮಂಡಿಸಲು ಸಾಕ್ಷ್ಯಾಧಾರ ಸಂಗ್ರಹಿಸಲು ಬ್ಯಾಂಕ್‌ನ ಲೆಕ್ಕಪತ್ರಗಳನ್ನು ತಪಾಸಣೆ ನಡೆಸುವ ಅಗತ್ಯ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಉಳಿತಾಯ ಖಾತೆ (ಎಸ್‌ಬಿ) ಠೇವಣಿದಾರರಿಗೆ ಸದ್ಯದ ಶೇ 5ರಿಂದ ಶೇ 6ರಷ್ಟು ಬಡ್ಡಿ ದರ ಕೊಡುವ ಬಗ್ಗೆ ಅವರು ಯಾವುದೇ ಭರವಸೆ ನೀಡಿಲ್ಲ.

ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾರ್ಚ್‌ 5ರಂದು ಬ್ಯಾಂಕ್‌ ಮೇಲೆ ನಿರ್ಬಂಧ ಹೇರಿತ್ತು. ಖಾತೆಯಿಂದ ಠೇವಣಿ ಹಿಂದೆ ಪಡೆಯುವ ಮಿತಿಯನ್ನು ₹ 50 ಸಾವಿರಕ್ಕೆ ನಿಗದಿಪಡಿಸಿತ್ತು. ಬ್ಯಾಂಕ್‌ ಪುನಶ್ಚೇತನ ಯೋಜನೆ ಜಾರಿಗೊಳಿಸಿರುವ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ನಿರ್ಬಂಧ ಅಂತ್ಯವಾಗಲಿದೆ.

ಷೇರುಗಳಿಗೆ ಬೇಡಿಕೆ

ಪುನಶ್ಚೇತನ ಯೋಜನೆ ಘೋಷಿಸಿದ ಬಳಿಕ ಬ್ಯಾಂಕ್‌ನ ಷೇರು ಭಾರಿ ಗಳಿಕೆ ಕಂಡುಕೊಳ್ಳುತ್ತಿದೆ.ಮೂರು ದಿನಗಳ ವಹಿವಾಟಿನಲ್ಲಿ ಶೇ 134ರಷ್ಟು ಏರಿಕೆಯಾಗಿದೆ. ಮಂಗಳವಾರದ ವಹಿವಾಟಿನಲ್ಲಿ ಶೇ 59ಕ್ಕೂ ಹೆಚ್ಚಿನ ಗಳಿಕೆ ಕಂಡಿತು.

ಬಿಎಸ್‌ಇನಲ್ಲಿ ಶೇ 58.09ರಷ್ಟು ಏರಿಕೆಯಾಗಿ ಪ್ರತಿ ಷೇರಿನ ಬೆಲೆ ₹ 58.65ಕ್ಕೆ ತಲುಪಿತು. ದಿನದ ಗರಿಷ್ಠ ₹ 64.15ಕ್ಕೆ ಏರಿಕೆಯಾಗಿತ್ತು.

ಎನ್‌ಎಸ್‌ಇನಲ್ಲಿ ಶೇ 59.29ರಷ್ಟು ಏರಿಕೆಯಾಗಿ ಪ್ರತಿ ಷೇರಿನ ಬೆಲೆ ₹ 59.10ಕ್ಕೆ ತಲುಪಿತು. ಮೂರು ದಿನಗಳಲ್ಲಿ ಮಾರುಕಟ್ಟೆ ಮೌಲ್ಯದಲ್ಲಿ ₹ 8,570 ಕೋಟಿ ಹೆಚ್ಚಾಗಿದ್ದು, ₹ 14,958 ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.